ಕೋಲಾರ: ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ದೇಶಾದ್ಯಂತ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಎಲ್ಲೆಡೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಅಭಿಮಾನಿಯೊಬ್ಬ ಸಿನಿಮಾ ಟಿಕೆಟ್ ಸಿಗದೆ ಕಣ್ಣೀರು ಹಾಕಿರುವ ಘಟನೆಯೂ ನಡೆದಿದೆ.
ನಗರದ ನಾರಾಯಣಿ ಚಿತ್ರಮಂದಿರದ ಮುಂಭಾಗ ಅಪ್ಪು ಫೋಟೋಗೆ ಕೈ ಮುಗಿದು ಅಭಿಮಾನಿ ಕಣ್ಣೀರು ಹಾಕಿದ್ದಾನೆ. ಶ್ರೀನಿವಾಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೂಲಿ ಕೆಲಸ ಬಿಟ್ಟು ನೆಚ್ಚಿನ ನಟನ ಸಿನಿಮಾ ನೋಡಬೇಕೆಂದು ಆಗಮಿಸಿದ್ದರು. ಆದರೆ ಆನ್ಲೈನ್ನಲ್ಲಿ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಇದರಿಂದ ಟಿಕೆಟ್ ಸಿಗದೇ ಕಣ್ಣೀರಿಟ್ಟು ಹೊರ ನಡೆದರು.
ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ: ಇಂದು ಪುನೀತ್ ಅಭಿಮಾನಿಗಳಲ್ಲಿ ಸಂಭ್ರಮ ಮಾಡಿದ್ದು, ಅಪ್ಪು ಕೊನೆಯ ಚಿತ್ರ ಜೇಮ್ಸ್ ಕಣ್ತುಂಬಿಕೊಳ್ಳಲು ಶಾರದಾ ಹಾಗೂ ನಾರಾಯಣಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ. ಚಿತ್ರಮಂದಿರಗಳ ಎದುರು ದೊಡ್ಡ ದೊಡ್ಡ ಕಟೌಟ್ಸ್ ರಾರಾಜಿಸುತ್ತಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಟ್ಯಾಟೊ ಹಾಕಿಸಿಕೊಂಡ ಅಭಿಮಾನಿ: ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿ ಮುನಿರಾಜು ತನ್ನ ಎದೆಯ ಮೇಲೆ ಅಪ್ಪು ಭಾವಚಿತ್ರವನ್ನು ಟ್ಯಾಟೊ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.ಈತ ತಾಲೂಕಿನ ಮುದುವಾಡಿ ಮೂಲದ ರೈತ. ಜೇಮ್ಸ್ ಚಿತ್ರ ವೀಕ್ಷಿಸಲು ಆಗಮಿಸಿದ್ದನು. ಇನ್ನೊಬ್ಬ ಅಭಿಮಾನಿ ಅಪ್ಪು ಫೋಟೊ ಜೊತೆಗೆ ಬೈಕ್ ರ್‍ಯಾಲಿ ಮಾಡಿದನು.
ಅನ್ನದಾನ ಮಾಡಿದ ಅಪ್ಪು ಫ್ಯಾನ್ಸ್ : ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯ ಚಿತ್ರಮಂದಿರದ ಬಳಿ ಸಂಭ್ರಮ ಜೋರಾಗಿತ್ತು. ಅಪ್ಪು ಅಭಿಮಾನಿಗಳು ಪ್ರೇಕ್ಷಕರಿಗೆ ಅನ್ನದಾನ ಕಾರ್ಯಕ್ರಮ, ಬೃಹತ್ ಕಟೌಟ್ಗಳ ಮೆರವಣಿಗೆ ಮಾಡಿದರು. ಅಪ್ಪು ಅಭಿಮಾನಿಗಳ ಸಂಘದಿಂದ ನಗರದಲ್ಲಿ ಬೆಳ್ಳಿ ರಥ, ಪುಷ್ಪ ಪಲ್ಲಕ್ಕಿಗಳ ಮೆರವಣಿಗೆ ಕೂಡ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: ಬೆಳಗಾವಿ: ಸೇನಾ ಸಮವಸ್ತ್ರದಲ್ಲೇ ಚಿತ್ರಮಂದಿರಕ್ಕೆ ಆಗಮಿಸಿದ ನಿವೃತ್ತ ಯೋಧ