ಕೋಲಾರ: ಗರ್ಭಿಣಿ ಮಹಿಳೆಯೊಬ್ಬರು ಲಾಕ್ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗದೆ ಬಹಳ ಜಾಗರೂಕತೆಯಿಂದ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ಜೋಪಾನ ಮಾಡಿದ್ದರು. ಹೀಗಿದ್ದರೂ ನಿಗೂಢವಾಗಿ ಕೊರೊನಾ ವಕ್ಕರಿಸಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಕೋಲಾರ ತಾಲೂಕಿನ ಬೆಟ್ಟಹೊಸಪುರ ಗ್ರಾಮದ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗರ್ಭಿಣಿ ಎನ್ನುವ ಕಾರಣಕ್ಕೆ ಕೊರೊನಾ ಭೀತಿಯಿಂದ ಮನೆಯಿಂದ ಹೊರ ಬಾರದೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಹೀಗಿರುವಾಗ ಜೂನ್ 6ರಂದು ಜಿಲ್ಲಾಸ್ಪತ್ರೆಗೆ ಮಹಿಳೆ ತಪಾಸಣೆಗೆಂದು ಬಂದಿದ್ರು. ಈ ವೇಳೆ ಮಹಿಳೆಗೆ ಕೋವಿಡ್ ಟೆಸ್ಟ್ ಮಾಡಲು ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ನಿನ್ನೆ ಸಂಜೆ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.
ಬೆಟ್ಟಹೊಸಪುರ ಗ್ರಾಮದ ಗರ್ಭಿಣಿ ಮಹಿಳೆಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಸೀಲ್ ಡೌನ್ ಮಾಡಿ, ಕಂಟೈನ್ಮೆಂಟ್ ಝೋನ್ ಎಂದು ಘೋಸಲಾಗಿದೆ. ಜೊತೆಗೆ ಇಡೀ ಗ್ರಾಮಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಸೋಂಕಿನ ಮೂಲ ತಿಳಿಯದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದಲ್ಲಿ ಸರ್ವೆ ಕಾರ್ಯ ಶುರು ಮಾಡಿದ್ದಾರೆ.
ಗರ್ಭಿಣಿ ಮಹಿಳೆಯ ಪತಿ ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಅವರಿಂದ ಸೋಂಕು ಹರಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಮಹಿಳೆ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ಮನೆಯವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಇನ್ನು ಗರ್ಭಿಣಿ ಮಹಿಳೆಯ ಸೋಂಕಿನ ಮೂಲ ತಿಳಿಯುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಜೊತೆಗೆ ಕೊರೊನಾ ಸಮುದಾಯಕ್ಕೆ ಹರಡಿದೆಯಾ ಎನ್ನುವ ಭಯ ಜಿಲ್ಲೆಯ ಜನರನ್ನು ಕಾಡುತ್ತಿದೆ.