ಕೋಲಾರ: ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಶೌಚಾಲಯದ ನೀರು ಮುಖ್ಯ ರಸ್ತೆಗಳಲ್ಲಿ ಹರಿಯುತ್ತಿದೆ. ಈ ಹಿನ್ನೆಲೆ ಗ್ರಾಮಸ್ಥರು ಹಾಗು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದಲ್ಲಿನ ಶೌಚಾಲಯದ ನೀರೆಲ್ಲಾ ರಸ್ತೆಗಳಿಗೆ ಹರಿಯುವಂತಾಗಿದೆ. ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡಾ ಕ್ರಮ ಕೈಗೊಳ್ಳದ ಹಿನ್ನೆಲೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ರಸ್ತೆಗಳು ಹಳ್ಳಗಳಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸುಮಾರು ಆರು ತಿಂಗಳಿನಿಂದ ಈ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು, ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.