ಕೋಲಾರ: ಪದೇ ಪದೇ ಚುನಾವಣೆಗೆ ಹೋಗುವುದಕ್ಕೆ ಯಾವುದೇ ಪಕ್ಷಗಳು ಸಿದ್ದ ಇಲ್ಲ, ಹೀಗಾಗಿ ಸರ್ಕಾರ ಉಳಿಯಬೇಕು ಯಾರೂ ಕೂಡ ಅವಸರಪಡಲು ಆಗುವುದಿಲ್ಲ ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದರು.
ಕೋಲಾರದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಮಾಡಿರುವ ಸಾಲವೇ ಇನ್ನೂ ತೀರಿಸಲು ಆಗುತ್ತಿಲ್ಲ. ಒಂದು ವೇಳೆ ಈಗ ಏನಾದ್ರೂ ಚುನಾವಣೆ ಬಂದರೆ ನಾನಂತೂ ಚುನಾವಣೆ ಎದುರಿಸುವುದಿಲ್ಲ. ಚುನಾವಣೆಗೆ ನಮಸ್ಕಾರ ಹಾಕಿ ಮನೆಯಲ್ಲಿರುತ್ತೇನೆ. ಸುಮ್ಮನೆ ಭಾಷಣಗಳಲ್ಲಿ ಚುನಾವಣೆಗೆ ರೆಡಿ ಅಂತ ಹೇಳಬಹುದು, ಆದರೆ ಯಾವುದೇ ಪಕ್ಷದವರು ಸಿದ್ಧರಿಲ್ಲ. ಸರ್ಕಾರ ಉಳಿಯುತ್ತೋ ಇಲ್ಲವೋ ಎನ್ನುವುದು ಉಪಚುನಾವಣೆ ಫಲಿತಾಂಶದ ನಂತರ ಗೊತ್ತಾಗುತ್ತದೆ ಎಂದರು.
ಹೊಸಕೋಟೆ ಉಪಚುನಾವಣೆಯಲ್ಲಿ ಸಂಸದ ಬಚ್ಚೇಗೌಡ ಮಗನಿಗೆ ಕುಮಾರಸ್ವಾಮಿ ಬೆಂಬಲ ಸೂಚಿಸಿರುವ ಕುರಿತು ಮಾತನಾಡಿ, ಬಚ್ಚೇಗೌಡ ಅವರು ನನ್ನ ಆತ್ಮೀಯರಾಗಿದ್ದವರು, ಕುಮಾರಸ್ವಾಮಿ ಬೆಂಬಲ ನೀಡುವುದಾದರೆ ನನ್ನ ಬೆಂಬಲವೂ ಇರುತ್ತದೆ. ಹತ್ತು ವರ್ಷದ ಹಿಂದೆ ಬಿಜೆಪಿಯಿಂದ ಎಂಪಿ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ನನಗೆ ಸಿಕ್ಕಿತ್ತು. ಆಗ ದೆಹಲಿಯಲ್ಲಿ ಮಂತ್ರಿಯಾಗಿದ್ದ ಸುರೇಶ್ ಪ್ರಭು ಅವರು ಅಡ್ವಾಣಿ ಬಳಿ ಕರೆದುಕೊಂಡು ಹೋಗಿ ಟಿಕೆಟ್ ಫೈನಲ್ ಮಾಡಿದ್ದರು. ಅಂದು ಶಾಸಕರಾಗಿದ್ದ ಬಚ್ಚೇಗೌಡ ಹಾಗೂ ವಿಶ್ವನಾಥ್ ಇಬ್ಬರೂ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಯಡಿಯೂರಪ್ಪ ಅವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಒಂದು ವೇಳೆ ಅವತ್ತು ಬಚ್ಚೇಗೌಡ ನನ್ನ ಬೆಂಬಲಿಸಿದ್ದರೆ, ನಾನು ಇಂದು ಸಂಸದನಾಗಿರುತ್ತಿದ್ದೆ ಎಂದು ಹೇಳಿದರು.