ಕೋಲಾರ: ಮಾಜಿ ಸಂಸದರಾದ ಕೆ.ಹೆಚ್.ಮುನಿಯಪ್ಪ ಲಕ್ಷಗಟ್ಟಲೇ ವಿದ್ಯುತ್ ಬಿಲ್ ಕಟ್ಟದೇ ತಪ್ಪೆಸಗಿದ್ದಾರೆ. ತಪ್ಪು ಮಾಡುವುದು ಸಹಜ. ಆದರೆ ಮುನಿಯಪ್ಪನವರು ತಪ್ಪು ಮಾಡುವುದನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದ್ದಾರೆ.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡವರು 500 ರೂಪಾಯಿ ಕರೆಂಟ್ ಬಿಲ್ ಕಟ್ಟದಿದ್ದರೆ ತಕ್ಷಣ ಅಧಿಕಾರಿಗಳು ಕನೆಕ್ಷನ್ ಕಟ್ ಮಾಡುತ್ತಾರೆ. ಹೀಗಿರುವಾಗ 22 ಲಕ್ಷ ಬಿಲ್ ಕಟ್ಟದೆ ದೊಡ್ಡ ಮೊತ್ತ ಆಗುವವರೆಗೂ ಹೇಗೆ ಇರಲು ಸಾಧ್ಯ ಎಂದು ಅಧಿಕಾರಿಗಳನ್ನ ಪ್ರಶ್ನಿಸಿದರು. ಜನಪ್ರತಿನಿಧಿಗಳಾದವರು ಸಣ್ಣಪುಟ್ಟ ತಪ್ಪುಗಳನ್ನ ಮಾಡುತ್ತಾರೆ. ಆದರೆ ಇವರು ತಪ್ಪುಗಳನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆಂದು ಮಾಜಿ ಸಂಸದರ ಕಾಲೆಳೆದರು.
ಜನಪ್ರತಿನಿಧಿಗಳಾದ ನಾವು, ಸರ್ಕಾರಕ್ಕೆ ಮೋಸ ಮಾಡಬಾರದು. ಜನಪ್ರತಿನಿಧಿಗಳು ಜಿಲ್ಲೆಗೆ ಮಾದರಿಯಾಗಬೇಕು. ಮೊದಲು ಬಿಲ್ ಕಟ್ಟಿ ಎಂದು ಕೆ.ಹೆಚ್.ಮುನಿಯಪ್ಪ ಅವರಿಗೆ ಸೂಚಿಸಿದರು. ಇನ್ನು ಬಿಲ್ಡಿಂಗ್ ಮಾಲೀಕರಿಗೆ ನೋಟಿಸ್ ಕೊಟ್ಟಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ಎಂದು ದೂರಿದ ಅವರು, ಜನಸಾಮಾನ್ಯರಿಗೊಂದು ನ್ಯಾಯ, ಸಾಹುಕಾರರಿಗೊಂದು ನ್ಯಾಯ ಮಾಡಬಾರದು ಎಂದಿದ್ದಾರೆ.
ಇನ್ನು ಇದೇ ವೇಳೆ ಕೋಲಾರದ ಮುಳಬಾಗಿಲು ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಮಾತನಾಡಿದ ಅಬಕಾರಿ ಸಚಿವ ಹೆಚ್.ನಾಗೇಶ್, ಕೆ.ಹೆಚ್.ಮುನಿಯಪ್ಪ ಮತ್ತು ಅವರ ಪತ್ನಿ ಬಿಲ್ ಕಟ್ಟದೆ ಇರುವುದು ತಪ್ಪು. ಆ ರೀತಿ ತಪ್ಪು ಮಾಡಿದರೆ ದಂಡ ಕಟ್ಟಲೇಬೇಕು ಎಂದರು. ಅಲ್ಲದೆ ಬೆಸ್ಕಾಂನಲ್ಲಿ ಕೋರ್ಟು ಕಚೇರಿ ಅಂತ ಇದೆ. ಪೆನಾಲ್ಟಿ ಹಾಕ್ತಾರೆ. ಬಿಲ್ ಕಟ್ಟಲೇಬೇಕಾಗುತ್ತದೆ ಎಂದು ಹೇಳಿದರು.
ಇನ್ನು ಡಿಕೆಶಿ ಪ್ರತಿಭಟನೆ ವಿಚಾರಕ್ಕೆ ಸಂಭಂಧಿಸಿದಂತೆ ಮಾತನಾಡಿ, ಪ್ರತಿಭಟನೆ ಅವರ ಸಮುದಾಯಕ್ಕೆ ಸಂಬಂಧಿಸಿದ ವಿಚಾರ. ಅದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು. ಅಲ್ಲದೆ ಕಾನೂನಿನಡಿಯಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.