ಕೋಲಾರ: ಅಪರಿಚಿತರು ಬಂದಾಗ ಅವರ ವಿಳಾಸ, ಗುರುತನ್ನ ಪತ್ತೆ ಮಾಡಿ ಅವರನ್ನ ಜಿಲ್ಲೆಯೊಳಗೆ ಬರಮಾಡಿಕೊಳ್ಳಬೇಕೆಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ರು.
ಕೋಲಾರಕ್ಕೆ ಉಗ್ರಗಾಮಿಗಳ ನಂಟು ಹಿನ್ನಲೆ ಇಬ್ಬರ ಬಂಧನ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ದೇಶದೊಳಗಾಗಲಿ, ಕೋಲಾರದೊಳಗಾಗಲಿ ನಮ್ಮ ಹಳ್ಳಿಗಳೊಳಗಾಗಲಿ ಗುರುತು ಪರಿಚಯವಿಲ್ಲದವರು ಬಂದಾಗ, ಅವರ ಸಂಪೂರ್ಣ ವಿಳಾಸವನ್ನ ತಿಳಿದುಕೊಂಡು ಪ್ರವೇಶ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕೆಂದರು. ಮೊದಲು ದೇಶವನ್ನ ನಮ್ಮ ದೇಶ ನಮ್ಮ ಭಾರತ ಎಂಬ ಭಾವನೆಯಲ್ಲಿ ನೋಡಬೇಕು, ಯಾರೋ ಇಬ್ಬರನ್ನ ಕರೆದುಕೊಂಡು ಹೋಗಿದ್ದಕ್ಕೆ ಎಲ್ಲರನ್ನ ಬೆರಳು ಮಾಡುವುದು ಬೇಡ ಎಂದರು. ಅಲ್ಲದೆ ನಾವೆಲ್ಲಾ ಒಗ್ಗಟ್ಟಾಗಿ ಇದ್ದರೆ ಇಂತಹದ್ದಕ್ಕೆ ಕಡಿವಾಣ ಹಾಕುವುದರೊಂದಿಗೆ ಯಾರೇ ಹೊಸಬರು ಬಂದಾಗ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದಾಗ ದೇಶ ಸುಭದ್ರವಾಗಿ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ರು.
ಇನ್ನು ರಾಮನಗರದ ಕಪಾಲಿ ಬೆಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರ ಭಾವನೆಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡಬೇಕು. ಕಪಾಲಿ ಎಂದರೆ ಹಿಂದಿನಿಂದಲೂ ಬೈರವೇಶ್ವರ ಎಂದು ಹೆಸರಿದೆ, ಅದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ರು. ಅಲ್ಲದೆ ಡಿಕೆಶಿ ಅವರಿಗೂ ಕೈಮುಗಿದು ಬೇಡಿಕೊಳ್ಳುತ್ತೇನೆ ಯಾರನ್ನೋ ಓಲೈಕೆ ಮಾಡುವ ನಿಟ್ಟಿನಲ್ಲಿ ಏನೇನೋ ಮಾಡಬೇಡಿ, ಅಲ್ಲಿನ ಜನ ನಿಮಗೆ ಮತ ನೀಡಿ ಸುಮಾರು ಬಾರಿ ಗೆಲ್ಲಿಸಿದ್ದಾರೆ. ನೂರಾರು ವರ್ಷಗಳಿಂದ ಅಲ್ಲಿ ದೇವಸ್ಥಾನವಿದ್ದು ಅವರ ಮನಸ್ಸಿಗೆ ನೋವುಂಟಾಗದ ರೀತಿಯಲ್ಲಿ ನಡೆದುಕೊಳ್ಳಬೇಕೆಂದರು.
ಬೇರೆ ಜನಾಂಗದವರು ಯಾರು ಇದ್ದಾರೋ ಅವರಿಗೆ ಬೇರೆ ಜಾಗವನ್ನ ಗುರುತಿಸಿ ಸಹಾಯ ಮಾಡಿ ಆದ್ರೆ ಕಪಾಲಿ ಬೈರವೇಶ್ವರನಿಗೆ ಸೀಮಿತವಾಗಿರುವ ಜಾಗದಲ್ಲಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ರು.