ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಹರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ಜಿಲ್ಲೆಯ ಮುಳಬಾಗಿಲು ತಾಲೂಕಿನ 32 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸಚಿವರು ಚಾಲನೆ ನೀಡಿ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಹರಿಸುತ್ತೇವೆ. ಇಷ್ಟೋತ್ತಿಗಾಗಲೇ ನೀರು ಬರಬೇಕಾಗಿತ್ತು. ಆದರೆ, ಕೆಲವು ಅಡೆತಡೆಗಳಿಂದ ಕೊಂಚ ಸಮಯ ಪಡೆದಿದೆ. ಯೋಜನೆಗೆ ಇರುವ ಎಲ್ಲಾ ಅಡೆ ತಡೆಗಳು ದೂರವಾಗಿ ಯೋಜನೆ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಮಾದರಿಯಲ್ಲಿ ಬೆಂಗಳೂರು ತ್ಯಾಜ್ಯ ನೀರನ್ನು ಮತ್ತಷ್ಟು ಜಿಲ್ಲೆಗಳಿಗೆ ಹರಿಸುವ ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಹರಿಯುವ ವೃಷಭಾವತಿ ನದಿ ನೀರನ್ನು ನೆಲಮಂಗಲ, ದೊಡ್ಡಬಳ್ಳಾಪುರಕ್ಕೆ ಹರಿಸಲಾಗುತ್ತದೆ. ಈಗಾಗಲೇ 1400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಮಂತ್ರಿಮಂಡಲದಲ್ಲಿ ಅನುಮೋದನೆ ಸಿಕ್ಕಿದೆ ಎಂದರು.
ನಿತ್ಯ 24 ಟಿಎಂಸಿ ನೀರು ಬೆಂಗಳೂರಲ್ಲಿ ಸಿಗಲಿದ್ದು, 18 ಟಿಎಂಸಿ ನೀರು ಸದ್ಬಳಕೆಯಾಗಲಿದೆ. ಬೆಂಗಳೂರು ಜನ ಬಳಸುವ ತ್ಯಾಜ್ಯ ನೀರಿನಿಂದ ಇನ್ನೂ 2 ರಿಂದ 3 ಜಿಲ್ಲೆಗಳಿಗೆ ನೀರು ಕೊಡಬಹುದು. ಇನ್ನು 10 ಟಿಎಂಸಿ ನೀರು ಸಿಗಲಿದೆ. ಆದರೆ, ಅದಕ್ಕೆ ಬೇಕಾದ ಪ್ಲಾಂಟ್‌ಗಳಿಲ್ಲ ಎಂದರು.
ಇದೆಲ್ಲಾವೂ ಸಹ ಅಂತರ್ಜಲ ವೃದ್ಧಿಸುವ ಯೋಜನೆಯಾಗಿದ್ದು, ಅಗತ್ಯ ಇರುವವರಿಗೆ ನೀರು ಕೊಡುತ್ತಿದ್ದೇವೆ. ಬುದ್ಧಿವಂತರಿರುವ ಕಡೆ ವಿರೋಧ ಇರುತ್ತದೆ. ಹಾಗಾಗಿ ಕೆಲವರು ವಿಡಿಯೋಗಳನ್ನು ಮಾಡಿ ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ. ಬೆಂಗಳೂರು ತ್ಯಾಜ್ಯ ನೀರಿನಿಂದ ಯಾವುದೇ ಅಪಾಯ ಇಲ್ಲ. ಇದರಿಂದ ಯಾವುದೇ ಪ್ರಾಣಿ, ಪಕ್ಷಿ, ಜನರಿಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.