ಕೋಲಾರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಪರಿಣಾಮ, ಬಡ ವರ್ಗದ ಕುಟುಂಬಗಳಿಗೆ ಆಹಾರ ತಯಾರಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಕೂಡಾ ಶಾಲೆಗೆ ಬರುವ ಮಕ್ಕಳಿಗೆ ಎಂದಿನಂತೆ ಬಿಸಿಯೂಟ ನೀಡಲಾಗುತ್ತಿದೆ.
ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಊರಲ್ಲೇ ತಮ್ಮ ತಂದೆ- ತಾಯಿ ಜೊತೆಗೆ ಇರುವ ಮಕ್ಕಳು ಊಟದ ಸಮಯಕ್ಕೂ ಸ್ವಲ್ಪ ಮುಂಚಿತವಾಗಿ ಶಾಲೆಗೆ ಬಂದು ಆಟವಾಡಿಕೊಂಡು ನಂತರ ಊಟ ಮಾಡಿ ಹೋಗುತ್ತಾರೆ. ಅಷ್ಟೇ ಅಲ್ಲ, ಬೇರೆ ಊರುಗಳಿಂದ ಬೇಸಿಗೆ ರಜೆಗೆಂದು ತಮ್ಮ ಸಂಬಂಧಿಕರ ಮಕ್ಕಳು ಬಂದ್ರೂ ಕೂಡಾ ಶಾಲೆಗಳಲ್ಲಿ ಊಟ ಹಾಕಲಾಗುತ್ತಿದೆ.
ಬರದ ನಾಡು ಕೋಲಾರದಲ್ಲಿ ಕಳೆದ ವರ್ಷ ಒಂದು ಹನಿ ಮಳೆಯಾಗಿಲ್ಲ. ಹೀಗಾಗಿ ಬೆಳೆ ಇಲ್ಲದೆ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಇದೆ. ಮಕ್ಕಳು ಹಾಗೂ ದೊಡ್ಡವರು ಬೇರೆಡೆಗೆ ವಲಸೆ ಹೋಗದಿರಲಿ ಅನ್ನೋ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ದೊಡ್ಡವರಿಗೆ ಕೆಲಸ ನೀಡಲಾಗುತ್ತಿದೆ.
ಇನ್ನು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಜೆಯ ಮಜಾಗೆ ಅಡ್ಡಿ ಆಗಬಾರದು. ಮಕ್ಕಳು ಬೇರೆ ಊರುಗಳಿಗೆ ಹೋಗದೆ ಬಿಸಿಯೂಟದ ಕಾರಣಕ್ಕೆ ಇಲ್ಲೇ ಉಳಿಯಬಾರದೆಂದು, ಮಕ್ಕಳು ಜಿಲ್ಲೆಯ ಯಾವುದೇ ಊರಿನ ಯಾವುದೇ ಶಾಲೆಗೆ ಹೋದರೂ, ಬಿಸಿಯೂಟ ನೀಡುವಂತೆ ಸೂಚನೆ ನೀಡಲಾಗಿದೆ. ಬೇಸಿಗೆ ಬಿಸಿಯೂಟದ ಹೆಸರಲ್ಲಿ ಅವ್ಯವಹಾರಕ್ಕೂ ಕೈ ಹಾಕದಂತೆ ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳಲು ವಿಶೇಷವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಒಟ್ಟಾರೆ ಈ ವರ್ಷದ ಬರಗಾಲ, ಜನ-ಜಾನುವಾರುಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಇಂಥ ಬರ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಅನಾನುಕೂಲವಾಗದಂತೆ ಬೇಸಿಗೆಯ ಬಿಸಿಯೂಟ ನೀಡುವ ಮೂಲಕ ಬರಗಾಲದಲ್ಲಿ ಶಾಲಾ ಮಕ್ಕಳ ಹಸಿವು ನೀಗಿಸುತ್ತಿರುವುದು ಒಳ್ಳೆಯ ಕೆಲಸ. ಇದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.