ಕೋಲಾರ: ಮೇ.4 ರ ನಂತರ ಮದ್ಯದಂಗಡಿಗಳು ತೆರೆಯುವ ಸಾಧ್ಯತೆ ಇದೆ ಎಂದು ನಗರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ.
ಇಂದು ಕಾರ್ಮಿಕ ದಿನಾಚರಣೆ ಹಿನ್ನೆಲೆ ಶುಭಾಶಯಗಳನ್ನ ತಿಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿತ್ಯ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಜನರು ಕರೆ ಮಾಡಿ ಮದ್ಯದಂಗಡಿಗಳು ಯಾವಾಗ ತೆರೆಯುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆ ಇದು ನನಗೆ ತಲೆನೋವಾಗಿ ಪರಿಣಮಿಸಿದ್ದು, ಮೇ.4 ರ ನಂತರ ತೆರೆಯುವ ಬಗ್ಗೆ ತಿಳಿಸಿದರು.
ಅಲ್ಲದೇ ನಾಳೆ ಅಥವಾ ಮೇ.4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡುವಂತಹ ನಿರ್ದೇಶನದ ಮೇರೆಗೆ, ಮದ್ಯದಂಗಡಿಗಳು ತೆರೆಯುವ ನಿರ್ಧಾರವನ್ನ ಮಾಡಲಾಗುತ್ತದೆ. ಇನ್ನು ಅಬಕಾರಿ ಅಧಿಕಾರಿಗಳು ಮದ್ಯದಂಗಡಿಗಳಲ್ಲಿ ತಪಾಸಣೆ ನಡೆಸುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಗಡಿಗಳ ಮಾಲಿಕರು ಕರೆ ಮಾಡಿ ತಿಳಿಸುತ್ತಿದ್ದು, ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದರು.