ಕೋಲಾರ : ಕೊರೊನಾ ಸೋಂಕು ಹರಡುವಿಕೆಯ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಆದೇಶಿಸಿದ್ದಾರೆ.
ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳ ನಿದೇರ್ಶನದಂತೆ ಸ್ವಚ್ಚತೆ, ಗಡಿಭಾಗದ ಜನ ತಪಾಸಣೆ ಮಾಡುವುವಂತೆ ಸೂಚನೆ ನೀಡಲಾಗಿದೆ. ಆಂಧ್ರ, ತಮಿಳನಾಡಿನಿಂದ ಜಿಲ್ಲೆಗೆ ಬರುವಂತಹ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದರು.
ಜೊತೆಗೆ ಜಿಲ್ಲೆಯ ಆರೂ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಹೊರದೇಶಗಳಿಂದ ಬಂದ ಸುಮಾರು 40 ಜನರನ್ನ ತಪಾಸಣೆ ಮಾಡಲಾಗಿದ್ದು, 4 ಜನರ ಹೋಮ್ ಐಸೋಲೇಷನ್ ಮುಗಿದಿದ್ದು, 36 ಜನರ ವರದಿ ನೆಗಟಿವ್ ಬಂದಿದೆ. ಇದೇ ತಿಂಗಳ 31ಕ್ಕೆ ಅವರ ಹೋಮ್ ಐಸೋಲೇಷನ್ ಮುಗಿಯುತ್ತದೆ ಎಂದು ತಿಳಿಸಿದರು.
ಸೋಂಕು ಹರಡುವ ಮುನ್ನೆಚ್ಚರಿಕೆಯಿಂದ ಮದುವೆ, ಸಭೆ, ಸಮಾರಂಭಗಳು, ಐದು ಜನ ಒಂದೆಡೆ ಸೇರದಂತೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೋಟೆಲ್, ದಿನಸಿ ಅಂಗಡಿಗಳನ್ನ ಹೊರತುಪಡಿಸಿ ಬೀದಿ ಬದಿ ವ್ಯಾಪಾರ, ಮಾಂಸದ ಅಂಗಡಿ ನಿಷೇಧ ಮಾಡಲಾಗಿದೆ ಎಂದು ಹೇಳಿದರು.