ಕೋಲಾರ: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನು ಕಳವು ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು, ಬಳಿಕ ಪರಾರಿ ಆಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಮಾಲೂರು ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎಂಬಾತ ಔಷಧಿಗಳನ್ನು ಕಳವು ಮಾಡುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಡಿ.ಎನ್. ದೊಡ್ಡಿ ಗಡಿ ಗ್ರಾಮವಾಗಿದ್ದು, ಕೊರೊನಾ ಸಂದರ್ಭದಲ್ಲಿ ಬಡ ರೋಗಿಗಳ ಸೇವೆ ಮಾಡಬೇಕಾದ ಸಿಬ್ಬಂದಿಯೇ ಆಸ್ಪತ್ರೆಯಲ್ಲಿನ ಔಷಧಿಗಳನ್ನು ಕದ್ದು ಬೇರೆಡೆ ಮಾರಾಟ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದು ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಸುರೇಶ್ ಎಂಬ ಸಿಬ್ಬಂದಿ ಔಷಧಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದಾನೆಂಬ ಮಾತುಗಳು ಕೇಳಿ ಬಂದ ಹಿನ್ನೆಲೆ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಗ್ರಾಮಸ್ಥರು ಕಾಯುತ್ತಿದ್ದರು. ಇಂದು ಔಷಧಿಗಳನ್ನು ಕದ್ದೊಯ್ಯುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಗ್ರಾಮಸ್ಥರ ಕೈಗೆ ಸಿಬ್ಬಂದಿ ಸುರೇಶ್ ಸಿಕ್ಕಿಬೀಳುತ್ತಿದ್ದಂತೆಯೇ, ಗ್ರಾಮಸ್ಥರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಇದನ್ನೂ ಓದಿ: 24 ಗಂಟೆಗಳಿಂದ ಆಕ್ಸಿಜನ್ಗಾಗಿ ಕಾದು ನಿಂತ ಟ್ಯಾಂಕರ್... ಮುಂದೇನಾಯ್ತು?
ಈ ವೇಳೆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಮುಂದೆ ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ, ಸ್ಥಳಕ್ಕೆ ಭೇಟಿ ನೀಡಿದ ಮಾಲೂರು ಪೊಲೀಸರು ಗ್ರಾಮಸ್ಥರ ಮನವೊಲಿಸಿ, ಸಿಬ್ಬಂದಿಯ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದಾರೆ. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.