ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಈ ಬಾರಿ ನೆಲಗಡಲೆ ಬೆಳೆ ಕೈಕೊಟ್ಟಿದೆ. ಕಾರಣ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರೋದು ಅಂದ್ರೆ ನಿಮಗೆ ಆಶ್ಚರ್ಯ ಆಗ್ಬೋದು.
ಹೌದು ಪ್ರತಿವರ್ಷ ಬರಗಾಲದಿಂದ ತತ್ತರಿಸಿ ಹೋಗುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಒಂದಷ್ಟು ಉತ್ತಮ ಮಳೆಯಾಗಿತ್ತು. ಅದು ರೈತರು ನಿಜಕ್ಕೂ ಸಂತಸ ಪಡುವ ವಿಚಾರ, ಆದ್ರೆ ಅದೇ ಮಳೆ ಕೋಲಾರ ಜಿಲ್ಲೆಯ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ನೆಲಗಡೆಲೆ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ. ನೆಲೆಗಡಲೆ ಬೆಳೆ ಹೂ ಬಿಡುವ ಹಂತದಲ್ಲಿ ಹೆಚ್ಚಾಗಿ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ ನೆಲಗಡಲೆ ಬೆಳೆ ಕಾಯಿ ಕಟ್ಟದೆ ಹಾಳಾಗಿದ್ದು, ನೆಲೆಗಡಲೆ ಬೆಳೆದ ರೈತರು ನಷ್ಟ ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜಿಲ್ಲೆಯಲ್ಲಿ 7,700 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ ಅತೀ ಹೆಚ್ಚು ಅಂದರೆ ಮುಳಬಾಗಿಲು ತಾಲೂಕಿನಲ್ಲಿ ರೈತರು 5,200 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆದಿದ್ದು ಬಹುತೇಕ ಬೆಳೆ ಕೈಕೊಟ್ಟಿದೆ.
ಇನ್ನು ಜಿಲ್ಲೆಯಲ್ಲಿ ಒಂದು ವರ್ಷ ಬರಗಾಲ ಮತ್ತೊಂದು ವರ್ಷ ನೆರೆ ಹೀಗೆ ಹತ್ತು ಹದಿನೈದು ವರ್ಷಗಳಿಂದ ಜಿಲ್ಲೆಯ ರೈತರ ಜೊತೆಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ ಈ ವರ್ಷ ಮುಂಗಾರಿನಲ್ಲೇ ರೈತರಿಗೆ ಉತ್ತಮ ನಿರೀಕ್ಷೆ ಹುಟ್ಟುಹಾಕಿದ್ದ ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ರಾಗಿ ಜೊತೆಗೆ ನೆಲಗಡಲೆಯನ್ನು ಹೆಚ್ಚಿನ ರೈತರು ಬೆಳೆದಿದ್ದರು. ಆದ್ರೆ ಉತ್ತಮ ಮಳೆಯಾಗಿದ್ದೇ ಇಂದು ರೈತರಿಗೆ ಕಂಟಕವಾಗಿ ಪರಿಣಮಿಸಿ, ನೆಲಗಡಲೆ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆಲಗಡಲೆ ಬೆಳೆದ ಸಾವಿರಾರು ರೈತರು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಈಗ ಮಳೆಯಿಂದ ಬೆಳೆ ಹಾನಿಯಾಗಿರುವ ಪರಿಣಾಮ ಸರ್ಕಾರ ರೈತರ ನೆರವಿಗೆ ಬರಬೇಕು ಅನ್ನೋದು ರೈತರ ಮನವಿಯಾಗಿದೆ.