ಕೋಲಾರ : ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಾಗಿರುವ ಹಿನ್ನಲೆ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿರುವುದು ಕಂಡು ಬಂದಿತು.
ಭಾನುವಾರದ ಲಾಕ್ಡೌನ್ನಿಂದಾಗಿ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಇನ್ನೆಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ. ಇನ್ನು ದಿನಸಿ, ಹಾಲು, ತರಕಾರಿ, ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಉಳಿದಂತೆ ಸಾರಿಗೆ ಸಂಚಾರ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಆಗಿದೆ.
ಜೊತೆಗೆ ತುರ್ತು ವಾಹನಗಳನ್ನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಲಾಕ್ಡೌನ್ ನಡುವೆಯೂ ರಸ್ತೆಗಿಳಿದ ಕೆಲ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಇನ್ನು ತರಕಾರಿ ದಿನಸಿ ಕೊಳ್ಳಲು ಎಂದಿನಂತೆ ಬಾರದ ಜನರಿಂದಾಗಿ, ರಸ್ತೆಯಲ್ಲಿ ಖಾಲಿಯಾಗಿದ್ದವು.
ಇನ್ನು ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಸಹ ಇಂದು ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ಬಂದ್ ಮಾಡಲಾಗಿದೆ. ಶನಿವಾರದ ಮಧ್ಯಾಹ್ನದಿಂದಲೇ ರೈತರು ತಾವು ಬೆಳೆದಿರುವ ತರಕಾರಿಗಳನ್ನ ಮಾರುಕಟ್ಟೆಗೆ ತರದೆ ಭಾನುವಾರದ ಲಾಕ್ ಡೌನ್ಗೆೆ ಸಹಕಾರ ನೀಡಿದರು.
ಅನಗತ್ಯವಾಗಿ ಓಡಾಟ ನಡೆಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನ ಜಿಲ್ಲಾಡಳಿತ ನೀಡಿದೆ. ಜೊತೆಗೆ ಕರ್ಫ್ಯೂ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.