ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಸಾಕಷ್ಟು ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ವರ್ತೂರ್ ಪ್ರಕಾಶ್ ಮಾಧ್ಯಮಗಳ ಮುಂದೆ ನಾನು ಇನ್ನೂ ಒಂದು ಬಾರಿ ಎಂಎಲ್ಎ ಆಗಬೇಕು. ನನ್ನ ಬಗ್ಗೆ ಏನೇನೋ ಸುದ್ದಿ ಪ್ರಸಾರ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡ ಘಟನೆ ಇಂದು ನಡೆದಿದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣವಾಗಿ ಇಂದಿಗೆ ಒಂಬತ್ತು ದಿನ ಕಳೆದರೆ, ವರ್ತೂರ್ ಪ್ರಕಾಶ್ ಪೊಲೀಸರಿಗೆ ದೂರು ನೀಡಿ ನಾಲ್ಕು ದಿನಗಳೇ ಗತಿಸಿವೆ. ಈಗಾಗಲೇ ಬೆಂಗಳೂರಿನ ಬೆಳ್ಳಂದೂರಿನಿಂದ ಕೋಲಾರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆಯಾದ ನಂತರ ಕೋಲಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಅಂಶಗಳನ್ನು ಕಲೆ ಹಾಕಿರುವ ಪೊಲೀಸರು, 13 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಪುಣೆ ಹಾಗೂ ಆಂಧ್ರಪ್ರದೇಶದವರ ಕೈವಾಡ ಇದೆಯಾ ಎನ್ನುವುದನ್ನು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಅಪಹರಣಕಾರರು ಬಹುತೇಕ ಹೊರ ರಾಜ್ಯದವರಲ್ಲ. ಎಲ್ಲರೂ ನಮ್ಮ ರಾಜ್ಯದವರೇ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಅಪಹರಣಕಾರರನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿ ಅಪಹರಣಕಾರರು ನಮ್ಮ ರಾಜ್ಯದವರೇ ಆಗಿದ್ದರೂ ಇದನ್ನು ಮಾಡಿರುವವರು ಯಾರೂ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಓದಿ: ವರ್ತೂರ್ ಪ್ರಕಾಶ್ ಕಿಡ್ನ್ಯಾಪ್ ಪ್ರಕರಣ: ಹಣ ತಂದುಕೊಟ್ಟ ವ್ಯಕ್ತಿಯ ವಿಚಾರಣೆ
ನವೆಂಬರ್ 25 ರಂದು ಕಿಡ್ನಾಪ್ ಆದ ನಂತರ ವಿಶ್ರಾಂತಿ ಇಲ್ಲದೇ, ಮನಸ್ಸಿಗೆ ನೆಮ್ಮದಿ ಇಲ್ಲದೆ ಸಾಕಷ್ಟು ಒತ್ತಡಕ್ಕೆ ವರ್ತೂರ್ ಪ್ರಕಾಶ್ ಸಿಲುಕಿದ್ದರು. ನಿನ್ನೆ ಕನಕ ಜಯಂತಿ ಕಾರ್ಯಕ್ರಮವಿದ್ದರೂ, ಎಲ್ಲೂ ಕಾಣಿಸಿಕೊಳ್ಳದೇ ಬೆಂಗಳೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು. ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಕರಣದ ಮಾಹಿತಿ ನೀಡಿದರು.
ನಂತರ ಮಧ್ಯಾಹ್ನದ ಹೊತ್ತಿಗೆ ಕೋಲಾರ ಎಸ್ಪಿ ಕಚೇರಿಗೆ ಬಂದು, ಎಸ್ಪಿ ಕಾರ್ತಿಕ್ರೆಡ್ಡಿ ಅವರನ್ನು ಭೇಟಿ ಮಾಡಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಈ ವೇಳೆ, ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಬಾವುಕರಾದ ವರ್ತೂರ್ ಪ್ರಕಾಶ್ ಕೈ ಮುಗಿದು ಕೇಳಿಕೊಳ್ಳುತ್ತೇವೆ, ನನ್ನ ಬಗ್ಗೆ ಏನೇನೋ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿದರು.
ನನ್ನ ಮಗ ನನ್ನನ್ನು ಕಿಡ್ನಾಪ್ ಮಾಡಿಲ್ಲ, ನಾನು ಯಾರಿಗೂ ದುಡ್ಡು ಕೊಡಬೇಕಿಲ್ಲ. ಯಾವ ಮಹಾರಾಷ್ಟ್ರದ ಹಸು ವ್ಯವಹಾರವೂ ಇಲ್ಲ. ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ, ಯಾರನ್ನೂ ಮದುವೆಯಾಗಿಲ್ಲ. ಚುನಾವಣೆ ನಂತರದಲ್ಲಿ ಯಾವ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿಲ್ಲ. ತೋಟದಲ್ಲಿ ಸಗಣಿ ಎತ್ತಿಕೊಂಡು ಬಿದ್ದಿದ್ದೇನೆ. ಈ ಘಟನೆ ಯಾರೋ ನನ್ನ ಬಳಿ ಹಣ ಇದೆ ಎಂದು ತಿಳಿದು ಮಾಡಿರುವ ಕೃತ್ಯ. ಏನೇನೋ ಮಾಡಿ ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಎಂಎಲ್ಎ ಆಗಬೇಕು ಎಂದು ಮಾಧ್ಯಮಗಳ ಎದುರು ಕೈಮುಗಿದು ಕೇಳಿಕೊಂಡರು.
ಒಟ್ಟಾರೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿಹುವುಗಳು ಮತ್ತು ಕುರುಹುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಪೂರ್ಣ ತನಿಖೆಯ ಬಳಿಕವೇ ಎಲ್ಲ ಸತ್ಯಾಸತ್ಯತೆ ಹೊರ ಬರಬೇಕಿದೆ.
ಓದಿ: ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....