ಕೋಲಾರ: ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವ ಕೋಲಾರದಲ್ಲಿ ಹೈನೋದ್ಯಮದ ನಂತರ ಅತಿಹೆಚ್ಚು ಜನರು ನಂಬಿರುವುದು ಕುಕ್ಕುಟೋದ್ಯಮವನ್ನು. ಜಿಲ್ಲೆಯಲ್ಲಿ 488 ಬಾಯ್ಲರ್ ಕೋಳಿ ಫಾರಂಗಳಿದ್ದರೆ, 123 ಲೇಯರ್ಸ್ ಕೋಳಿ ಫಾರಂಗಳಿವೆ. ಇವುಗಳಲ್ಲಿ ತಿಂಗಳಿಗೆ ಸರಾಸರಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಹೀಗಿರುವಾಗಲೇ ಇತ್ತೀಚೆಗೆ ಶುರುವಾಗಿರುವ ಹಕ್ಕಿ ಜ್ವರದ ಭೀತಿ ಜಿಲ್ಲೆಯ ಕೋಳಿ ಫಾರಂ ಮಾಲೀಕರ ನಿದ್ದೆಗೆಡಿಸಿದೆ.
ಹಕ್ಕಿ ಜ್ವರದ ಸುದ್ಧಿ ಹರಿದಾಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮೊಟ್ಟೆಯ ಬೆಲೆ ಕುಸಿತವಾಗಿದೆ. ಇದು ಕೋಳಿ ಫಾರಂ ಮಾಲೀಕರಲ್ಲಿ ಆತಂಕ ತಂದಿಟ್ಟಿದೆ. ಅಷ್ಟೇ ಅಲ್ಲ, ಹಕ್ಕಿ ಜ್ವರದ ಬಗ್ಗೆ ಸರ್ಕಾರ ಹಾಗೂ ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದರ ಜೊತೆಗೆ ಹಕ್ಕಿಜ್ವರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು, ಕೋಳಿ ತಿನ್ನೋದರಿಂದ ಬರೋದಿಲ್ಲ ಅನ್ನೋ ಬಗ್ಗೆ ತಿಳುವಳಿಕೆ ನೀಡಬೇಕು. ಕೋಲಾರ ಗಡಿ ಜಿಲ್ಲೆಯಾಗಿರುವ ಕಾರಣ ಕಟ್ಟೆಚ್ಚರ ವಹಿಸಬೇಕು ಅನ್ನೋದು ಕೋಳಿ ಫಾರಂ ಮಾಲೀಕರ ಮಾತಾಗಿದೆ.
ಓದಿ:ಗದಗದಲ್ಲೂ ಶುರುವಾಯ್ತು ಹಕ್ಕಿಜ್ವರದ ಭೀತಿ!
ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆ ಸದ್ಯ ಹಕ್ಕಿಜ್ವರದ ಹಿನ್ನೆಲೆ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಕೋಳಿ ಫಾರಂಗಳಲ್ಲಿ ಕೋಳಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಅದಕ್ಕಾಗಿ 33 ಪಶು ವೈದ್ಯರ ತಂಡಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಹಕ್ಕಿಗಳ ಅಸಹಜ ಸಾವು, ಅಥವಾ ಹಕ್ಕಿಗಳ ಸಾವು ಕಂಡುಬಂದ ಕೂಡಲೇ ಸಾರ್ವಜನಿಕರು ಕರೆ ಮಾಡುವಂತೆ ತಾಲೂಕಿಗೊಂದರಂತೆ ಹೆಲ್ಪ್ಲೈನ್ ತೆರೆಯಲಾಗಿದೆ. ಇದೆಲ್ಲದರ ಜೊತೆಗೆ ಕೋಲಾರ ಜಿಲ್ಲೆಯ ಗಡಿಯ ಏಳು ಕಡೆಗಳಲ್ಲಿ ಚೆಕ್ಪೋಸ್ಟ್ಗಳನ್ನು ಮಾಡಿ ಜಿಲ್ಲೆಯ ಒಳಗೆ ಬರುವ ವಾಹನಗಳನ್ನು ಪರೀಕ್ಷಿಸಿ, ಬರುವ ಕೋಳಿಗಳ ಮೇಲೂ ನಿಗಾವಹಿಸಲಾಗುತ್ತಿದೆ. ಎಲ್ಲಾ ಕೋಳಿ ಪಾರಂ ಮಾಲೀಕರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಹಕ್ಕಿಜ್ವರದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರ ವಹಿಸಲಾಗಿದೆ.