ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಕುರಿತು ಶಿಕ್ಷಣ ಇಲಾಖೆ ಹೈ ಅಲರ್ಟ್ ಆಗಿದ್ದು, ಎಸ್.ಎಸ್.ಎಲ್.ಸಿ ಹೊರತುಪಡಿಸಿ ಇನ್ನೆಲ್ಲಾ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪರೀಕ್ಷೆ ನಡೆಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವುದರೊಂದಿಗೆ ವಿದ್ಯಾರ್ಥಿಗಳನ್ನ ಆತಂಕದಿಂದ ಪಾರುಮಾಡಲು ಮುಂದಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರತ್ನಯ್ಯ, ಈಗಾಗಲೇ ಕರೊನಾ ವೈರಸ್‍ನಿಂದಾಗಿ ಬೆಂಗಳೂರು ಭಾಗದಲ್ಲಿ ಐದನೇ ತರಗತಿಯವರೆಗೆ ರಜೆ ಘೋಷಣೆ ಮಾಡಿದ್ದಾರೆ. ಕೆಲ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಜಿಲ್ಲೆಯಲ್ಲೂ ಬೇಗ ಪರೀಕ್ಷೆಗಳನ್ನ ನಡೆಸಿ ರಜೆ ಘೋಷಣೆ ಮಾಡಲಾಗುವುದು ಎಂದರು.
ಇನ್ನು ಒಂದನೇ ತರಗತಿಯಿಂದ ಐದನೆ ತರಗತಿಯವರೆಗೆ ಮುಂದಿನ 16 ನೇ ತಾರೀಖು, ಹಾಗೂ ಆರನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 23 ನೇ ತಾರೀಖಿನೊಳಗೆ ಪರೀಕ್ಷೆ ನಡೆಸಬೇಕೆಂದು ಈಗಾಗಲೇ ವೇಳಾಪಟ್ಟಿ ನಿಗದಿ ಮಾಡಲಾಗಿದೆ ಎಂದರು.
ಅಲ್ಲದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೆಗಡಿ ಹಾಗೂ ಎದೆನೋವು ಕಾಣಿಸಿಕೊಂಡರೆ ಶೀಘ್ರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಪೋಷಕರೊಂದಿಗೂ ಸಭೆಗಳನ್ನ ನಡೆಸಿದ್ದೇವೆ ಎಂದರು.