ಕೋಲಾರ: ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು ಪಟ್ಟಣಗಳಿಗೆ ಕುಡಿವ ನೀರು ಪೂರೈಸುವ ಯರಗೋಳ ಯೋಜನೆಯ ಅಣೆಕಟ್ಟು ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರು ಟೀಕೆ ಮಾಡುವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಏನೂ ಅಭಿವೃದ್ಧಿ ಕೆಲಸ ನಡೆಯೊದಿಲ್ಲ ಎಂದು, ಆ ವಿರೋಧಿಗಳಿಗೆ ಕೇಳಲಿಕ್ಕೆ ಬಯಸುವೆ, ದಯಮಾಡಿ ಕಣ್ಣು ತೆರೆಯಿರಿ, ಕಣ್ಣು ಮುಚ್ಚಿಕೊಂಡು ರಾಜಕೀಯ ಕಾರಣಕ್ಕೋಸ್ಕರ ಮಾತನಾಡಲು ಹೋಗಬೇಡಿ ಎಂದು ಟಾಂಗ್ ನೀಡಿದರು.
ಕೋಲಾರ ಜಿಲ್ಲೆಯೊಂದಕ್ಕೆ 2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇದು ಸಣ್ಣ ಅನುದಾನವೇ? ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದ ಮೇಲೆ ಅಭಿವೃದ್ಧಿ ಆಗಿಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಕೆ ಸಿ ವ್ಯಾಲಿ ಮಾಡಬೇಡಿ. ಜನರಿಗೆ ವಿಷ ಕೊಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು.
ಪದೇ ಪದೆ ವಿಷದ ನೀರು ಎನ್ನುತ್ತಿದ್ದರೂ, ಇದರಿಂದ ಜಾನುವಾರುಗಳು ಸತ್ತಿವೆಯಾ ? ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಡಿ, ವಿಶ್ವಸಂಸ್ಥೆಯವರು ಬಂದು ಪರೀಕ್ಷಿಸಿ ಹೋಗಿದ್ದಾರೆ, ಅವರನ್ನಾದರೂ ಕೇಳಿ ತಿಳಿದುಕೊಳ್ಳಿ. ಎತ್ತಿನಹೊಳೆ ಯೋಜನೆ ಜಾರಿ ಆಗೊಲ್ಲ ಎಂದಿದ್ದರು, ಆದರೆ ಅವರಿಗೆಲ್ಲ ಇದೀಗ ಉತ್ತರ ಸಿಕ್ಕಿದೆ ಎಂದು ತಿಳಿಸಿದರು. ನಮ್ಮ ಸರ್ಕಾರದ ಅವಧಿಯಲ್ಲೇ ಎತ್ತಿನ ಹೊಳೆ ಯೋಜನೆಯನ್ನು ಮುಗಿಸಿ ಈ ಭಾಗದ ಎಲ್ಲ ಜನರಿಗೆ ನೀರು ಕೊಟ್ಟೆ ಕೊಡುತ್ತೇವೆ. ಟೀಕೆ ಮಾಡುವವರಿಗೆ ಹೊಟ್ಟೆ ಉರಿ ಬರಿಸುವ ಕೆಲಸ ಮಾಡುತ್ತೇವೆ ಎಂದು ವಿರೋಧ ಪಕ್ಷಗಳ ಮುಖಂಡರಿಗೆ ತಿರುಗೇಟು ನೀಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಯರಗೋಳ ಯೋಜನೆ ಜೊತೆಗೆ ವಿವಿಧ 38 ಕಾಮಗಾರಿಗಳಿಗೆ ಶಂಕುಸ್ಥಾಪನೆ, 21 ಕಾಮಗಾರಿ ಸೇರಿದಂತೆ 2219 ಕೋಟಿ ರೂ ಮೌಲ್ಯದ ಒಟ್ಟು 59 ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.
ಬಿಜೆಪಿ ಜೆಡಿಎಸ್ ನಾಯಕರು ಅಸಮಾಧಾನ: ವೇದಿಕೆಯಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಮಾತ್ರ ಭಾಷಣ ಆರಂಭಿಸಿದರು. 6 ಜನ ಸಚಿವರು, 6 ಜನ ಶಾಸಕರು, ಒಬ್ಬ ಎಂಪಿ ಇದ್ದರೂ, ಯಾರಿಗೂ ಭಾಷಣ ಮಾಡಲು ಅವಕಾಶ ನೀಡದಿದ್ದರಿಂದ ಬೇಸರಗೊಂಡ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ನಮಗೆ ಅವಕಾಶ ಕೊಡದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು ಹೈಡ್ರಾಮಾ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮ ತಡವಾಗಿರುವ ನೆಪ ಹೇಳಿ ಸಿಎಂ ಸಿದ್ದರಾಮಯ್ಯಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಯಿತು. ಇದರಿಂದ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಮುನಿಸಿಕೊಂಡರು. ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟಿದ್ದಾರೆ ಎನ್ನುವ ಸಿದ್ದರಾಮಯ್ಯ ವಿರುದ್ದ ಓಪನ್ ಚಾಲೆಂಜ್ ಮಾಡಿದ ಮುನಿಸ್ವಾಮಿ, ದಾಖಲೆ ಸಮೇತ ನೀವು ಜಿಲ್ಲೆಗೆ ಕೊಟ್ಟಿರುವ ಅನುದಾನ ಯಾರದ್ದು ಎಂದು ಸಾಬೀತು ಪಡಿಸಿ ಎಂದು ಸವಾಲ್ ಹಾಕಿದ್ದಾರೆ.
ಇದನ್ನೂಓದಿ:2026ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣ: ಮಾಜಿ ಸಿಎಂ ವೀರಪ್ಪ ಮೊಯ್ಲಿ