ಕೋಲಾರ: ಜಿಲ್ಲೆಯ ಆಲಹಳ್ಳಿ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿದೆ. ಪರಿಣಾಮ ಇಲ್ಲಿಯ ಭೂಮಿಗೆ ಚಿನ್ನದ ಬೆಲೆ ಇದೆ. ಹಾಗಾಗಿ ಖಾಸಗಿ ಕಂಪನಿಯೊಂದಕ್ಕೆ ಸರ್ಕಾರಿ ಜಮೀನು ಮಂಜೂರು ಮಾಡಲು ಕೆಲವು ಕಂದಾಯ ಇಲಾಖೆ ಸಿಬ್ಬಂದಿ ಶಾಮೀಲಾಗಿ ಜಿಲ್ಲಾಧಿಕಾರಿಗಳ ಸಹಿ ನಕಲು ಮಾಡಿ ಕೋಟ್ಯಂತರ ರೂ. ಹಣ ಹೊಡೆಯಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಸ್ತಾವನೆ ತಿರಸ್ಕಾರ: ಸನ್ ಲಾರ್ಜ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲೂಕಿನ ವಕ್ಕಲೇರಿ ಹೋಬಳಿಯ ಆಲಹಳ್ಳಿ ಗ್ರಾಮದ ಹಲವು ಸರ್ವೆ ನಂಬರ್ನಲ್ಲಿರುವ ಹಿಡುವಳಿ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಿದ್ದಾರೆ. ಈ ಜಮೀನುಗಳ ಮಧ್ಯದಲ್ಲಿ ಸರ್ವೆ ಸಂಖ್ಯೆ 127ರಲ್ಲಿ 3.23 ಎಕರೆ ಸರ್ಕಾರಿ ಖರಾನು ಕಟ್ಟೆ ಜಮೀನು ಆಗಿದ್ದು, ಇದನ್ನು ಯಾರಿಗೂ ಮಂಜೂರು ಮಾಡಲು ಬರುವುದಿಲ್ಲ. ಈ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸರ್ಕಾರ ಆದೇಶ ನೀಡಿದೆ.
ಆದರೂ ತಿಸ್ಕರಿಸಿದ್ದ ಪ್ರಸ್ತಾವನೆಯನ್ನು ತಿದ್ದಿ, ಜಿಲ್ಲಾಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾಕಾರಿಗಳ ಸಹಿಯನ್ನು ನಕಲು ಮಾಡಿ ಕೈಚಳಕ ತೋರಿದ್ದಾರೆ ಎನ್ನಲಾಗ್ತಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪತ್ರ ಬಂದಿರುವ ರೀತಿ ನಕಲಿ ದಾಖಲೆಯನ್ನು ಸೃಷ್ಟಿಸಿರುವ ಅಧಿಕಾರಿಗಳು, ಜಮೀನು ಮಂಜೂರು ಮಾಡಲು ಅವಕಾಶವಿದ್ದು, ತಹಶೀಲ್ದಾರ್ ಅವರಿಗೆ ಮುಂದಿನ ಕ್ರಮಕ್ಕಾಗಿ ಹಿಂದಿರುಗಿಸಿದ್ದಾರೆ. ಈ ವೇಳೆ, ಕಡತ ಪರಿಶೀಲನೆ ನಡೆಸಿದ ತಹಶೀಲ್ದಾರ್ ಇದು ನಕಲಿ ಎಂಬುವುದನ್ನು ಕಂಡು ಹಿಡಿದು ಪ್ರಕರಣವನ್ನು ಬಯಲು ಮಾಡಿದ್ದಾರೆ.
ಪ್ರಕರಣ ಬಯಲಾಗಿದ್ದು ಹೇಗೆ?: ಕಡತ ಬಹುತೇಕ ಅಂತಿಮ ಹಂತಕ್ಕೆ ಬಂದು ಕಂಪನಿ ಯವರಿಂದ ಶೇ.50ರಷ್ಟು ಹಣ ಕಟ್ಟಿಸಿಕೊಳ್ಳಲು ನೋಟಿಸ್ ನೀಡಬೇಕಾಗಿದ್ದ ಹಿನ್ನೆಲೆ ಅಧಿಕಾರಿಗಳು ಕಡತವನ್ನು ತಹಶೀಲ್ದಾರ್‌ಗೆ ಕಳುಹಿಸಿದ್ದರು. ಈ ವೇಳೆ, ಕಡತವನ್ನು ಪರಿಶೀಲಿಸಿ ತಹಶೀಲ್ದಾರ್ ನಾಗರಾಜ್ ಅವರಿಗೆ ಜಿಲ್ಲಾಧಿಕಾರಿಗಳ ಸಹಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಈ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ ತಾಲೂಕು ಕಚೇರಿಗೆ ಬಂದಿರುವ ಬೇರೊಂದು ಕಡತವನ್ನು ತರಿಸಿಕೊಂಡು ಪರಿಶೀಲಿಸಿದಾಗ ಸಹಿ ನಕಲಿ ಎಂಬುದು ಪತ್ತೆಯಾಗಿದೆ. ಹೀಗಾಗಿ ಗ್ರಾಮದ ಮಾರ್ಗಸೂಚಿ ಬೆಲೆಯಂತೆ ಕರ್ನಾಟಕ ಮಂಜೂರಾತಿ ನಿಯಮಗಳು 1969ರ ನಿಯಮ 22ರ ಅಡಿ ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಲು ಕಂಪನಿಯು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು.
ಅದರಂತೆ ಜಿಲ್ಲಾಕಾರಿಗಳು ತಹಶೀಲ್ದಾರ್, ಸಹಾಯಕ ಕಮಿಷನರ್‌ಗಳು ಸದರಿ ಜಮೀನು ಪಹಣಿ ದಾಖಲೆಯಂತೆ ಸರ್ಕಾರಿ ಖರಾಬು ಎಂಬುದಾಗಿ ವರ್ಗೀಕರಿಸಲಾಗಿದೆ. ಇನ್ನೂ ಕೈಗಾರಿಕಾ ಉದ್ದೇಶಕ್ಕಾಗಿ ಮಾರ್ಗಸೂಚಿ ದರದನ್ವಯ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯ ನೀಡಿದ ಹಿನ್ನೆಲೆ ಪ್ರಸ್ತಾವನೆಯನ್ನು ತಿರಸ್ಕಾರಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಅದರಂತೆ ಜಿಲ್ಲಾಧಿಕಾರಿಗಳು ಕೋಲಾರ ತಹಶೀಲ್ದಾರ್‌ಗೆ ಕಡತವನ್ನು ಹಿಂತಿರುಗಿಸುತ್ತಾ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿರುತ್ತಾರೆ. ಆದರೆ, ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಕಂಪನಿಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಸಂಬಂಧ ಇಲ್ಲವೆಂದು ಕಂಪನಿಯ ನಿರ್ದೇಶಕರು ಕೋಲಾರ ತಹಶೀಲ್ದಾರ್ ಅವರಿಗೆ ಜೂ.16ರಂದು ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.
ತಾಲೂಕು ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಬಂದಿರುವ ಕಡತಕ್ಕೆ ಪರ್ಯಾಯವಾಗಿ ಮತ್ತೊಂದು ಪತ್ರವನ್ನು ಸಿದ್ಧಪಡಿಸಿದ್ದಾರೆ. ಜಮೀನು ಮಂಜೂರಿಗೆ ಕೆಲ ಖಾಸಗಿ ವ್ಯಕ್ತಿಗಳು, ತಾಲೂಕು ಕಚೇರಿ ಸಿಬ್ಬಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗುಜರಾತ್ ಗಲಭೆ 2002: ಎಸ್ಐಟಿ ಕ್ಲೀನ್ಚಿಟ್ ಎತ್ತಿಹಿಡಿದ ಸುಪ್ರೀಂ ಕೋರ್ಟ್... ಪಿಎಂ ಮೋದಿಗೆ ರಿಲೀಫ್