ಕೋಲಾರ: ಕಠಾರಿಪಾಳ್ಯ ನಿವಾಸಿ ನವೀನ್ ಕುಮಾರ್ ಎಂಬಾತ ನಗರದ ಹೊರವಲಯದ ಎಸ್ಡಿಸಿ ಕಾಲೇಜು ಬಳಿಯ ಕೋಲಾರಮ್ಮ ಕೆರೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನು ಕಂಡ ಸ್ಥಳೀಯರೊಬ್ಬರು ಕೋಲಾರ ನಗರ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಈ ಸಾವಿನ ಬಗ್ಗೆ ಅನುಮಾನ ಮೂಡಿದ ಕಾರಣ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ನಂತರ ಅವರ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿದ ಬಳಿಕ ಇದು ಆತ್ಮಹತ್ಯೆ ಎಂಬುದು ಖಾತ್ರಿಯಾಗಿದೆ.
ನವೀನ್ ಕೋಲಾರದಲ್ಲಿ ಮಂಜುನಾಥ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ. ಕಳೆದ ಏಳೆಂಟು ವರ್ಷಗಳಿಂದ ಸ್ವಲ್ಪ ಮಾನಸಿಕ ರೋಗಕ್ಕೆ ತುತ್ತಾಗಿದ್ದ ನವೀನ್, ಆಗಾಗ ಯಾರಿಗೂ ಹೇಳದೆ ಎಲ್ಲೆಂದರಲ್ಲಿ ಹೋಗುತ್ತಿದ್ದನಂತೆ. ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದನಂತೆ. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ನಿನ್ನೆ ನವೀನ್ ಅತ್ತೆ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ನವೀನ್, ಇಂದು ಬೆಳಗ್ಗೆ ಎದ್ದು ತಮ್ಮ ಬೈಕ್ನಲ್ಲಿ ಕೋಲಾರಮ್ಮ ಕೆರೆಗೆ ಬಂದು ಯಾರೂ ಇಲ್ಲದ ವೇಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಇನ್ನು ಶವವನ್ನು ಕಂಡಾಗ ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬರುತ್ತಿರಲಿಲ್ಲ. ಕಾರಣ ನವೀನ್ ತಾನು ಬೆಂಕಿ ಹಚ್ಚಿಕೊಂಡರೂ ಒದ್ದಾಡದೆ ಉಸಿರು ಬಿಗಿ ಹಿಡಿದು ಮಲಗಿದ್ದಾನೆ. ಅಷ್ಟೇ ಅಲ್ಲ ನಾಲಿಗೆಯನ್ನು ಕಚ್ಚಿಕೊಂಡಿದ್ದಾನೆ. ಇದನ್ನು ಕಂಡ ಪೊಲೀಸರಿಗೆ ಇದು ಆತ್ಮಹತ್ಯೆನಾ ಅನ್ನೋ ಅನುಮಾನ ಮೂಡಿದ್ದು, ಈ ಹಿನ್ನೆಲೆ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ರು. ಬಳಿಕ ಮೃತನ ಮಾನಸಿಕ ಸ್ಥಿತಿ ತಿಳಿದ ನಂತರ ಸಿದ್ಧನಾಗೇ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಇದನ್ನೂ ಓದಿ:ವಿಜಯನಗರ ಜಿಲ್ಲೆ ರಚನೆ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್