ಕೋಲಾರ: ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ನೀಡಬೇಕಿದ್ದ ಪರಿಹಾರ ಹಣವನ್ನು ಇನ್ನೂ ನೀಡದಿರುವುದಕ್ಕೆ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ಸಿ ನಾರಾಯಣ ಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಶ್ರೀನಿವಾಸಪುರ ಹೊಗಳಗೆರೆಯ ಮಾವು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ನಾರಾಯಣ ಗೌಡ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ನಮಗೆ ಇನ್ನೂ ಹಣ ತಲುಪಿಲ್ಲ ಎಂದು ರೈತರು ಸಚಿವರ ಮುಂದೆ ದೂರು ನೀಡಿದರು.
ಈ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, ರೈತರಿಂದ ದೂರುಗಳು ಬರುತ್ತಿದ್ದರೆ ನಮಗೆ ಮುಜುಗರವಾಗುತ್ತದೆ. ಲಾಕ್ ಡೌನ್ ಸಮಯದಲ್ಲಿ ನೀವೆನ್ ಮನೆಯಲ್ಲಿ ಮಲಗಿದ್ರಾ. ಐದಾರು ದಿನಗಳೊಳಗೆ ರೈತರಿಗೆ ತಲುಪಬೇಕಾದ ಹಣ ಅವರ ಖಾತೆಗಳಿಗೆ ಜಮಾ ಆಗದಿದ್ದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತು ಅಧಿಕಾರಿಗಳು ಸಾಥ್ ನೀಡಿದರು.