ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ ಗ್ರಾಮ ದೇವತೆಯನ್ನು ದಲಿತ ಕುಟುಂಬಕ್ಕೆ ಸೇರಿದ ಬಾಲಕನೋರ್ವ ಮುಟ್ಟಿದ್ದಕ್ಕೆ ಆತನಿಗೆ ದಂಡ ವಿಧಿಸುವ ಬೆದರಿಕೆ ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಹಾಗೂ ಎಸ್ಪಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ-7 ರಂದು ಉಳ್ಳೇರಹಳ್ಳಿ ಗ್ರಾಮದ ಭೂತಮ್ಮ ದೇವರ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್ ಎಂಬಾತ ಮುಟ್ಟಿದ ಅನ್ನೋ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಸೇರಿ ಚೇತನ್ ತಂದೆ ರಮೇಶ್ ಹಾಗೂ ತಾಯಿ ಶೋಭಾರನ್ನು ಕರೆಸಿ ನ್ಯಾಯ ಪಂಚಾಯ್ತಿ ಮಾಡಿದ್ದರು. ನಂತರ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಒಂದು ವೇಳೆ ದಂಡ ಕಟ್ಟದಿದ್ದರೆ, ಊರು ಬಿಟ್ಟು ಹೋಗುವಂತೆ ಎಚ್ಚರಿಕೆ ನೀಡಿದ್ದರು.
ದೌರ್ಜನ್ಯ ಪ್ರಕರಣ ದಾಖಲು: ಘಟನೆ ನಡೆದು ಕೆಲ ದಿನಗಳ ನಂತರ ಗ್ರಾಮಕ್ಕೆ ಕೆಲವು ದಲಿತ ಸಂಘಟನೆ ಮುಖಂಡರು ಭೇಟಿ ನೀಡಿ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಂಡ ಈ ರೀತಿ ಅಸ್ಪೃಶ್ಯತೆಯನ್ನು ಖಂಡಿಸಿ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಧೈರ್ಯ ಹೇಳಿದ ನಂತರ ಸೆಪ್ಟಂಬರ್-20 ರಂದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿತ್ತು.
ಗ್ರಾಮದ ಮುಖಂಡರ ಜೊತೆ ಮಾತುಕತೆ: ಇನ್ನು, ಪ್ರಕರಣ ದಾಖಲಾಗುತ್ತಿದ್ದಂತೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿ ದಲಿತ ಕುಟುಂಬಕ್ಕೆ ದಂಡ ವಿಧಿಸಿ, ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದ ಒಟ್ಟು ಎಂಟು ಜನರನ್ನು ಸದ್ಯ ಮಾಸ್ತಿ ಪೊಲೀಸರು ಬಂಧಿಸಿದ್ದಾರೆ. ಇದಾದ ನಂತರ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಹಾಗೂ ಎಸ್ಪಿ ಡಿ. ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಕೆಲಸ ಕೊಡುವುದಾಗಿ ಭರವಸೆ: ಅಲ್ಲದೆ, ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ. ದೌರ್ಜನ್ಯಕ್ಕೊಳಗಾದ ಕುಟುಂಬದವರನ್ನು ಗ್ರಾಮದ ಭೂತಮ್ಮ ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ದೇವಾಲಯದ ಒಳಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಆ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸವಿದ್ದ ಮಹಿಳೆಗೆ ನಿವೇಶನ ಹಾಗೂ ಜೀವನೋಪಾಯಕ್ಕೆ ಒಂದು ಕೆಲಸ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸ್ ಬಂದೋಬಸ್ತ್: ಇನ್ನು ಸಂಸದ ಮುನಿಸ್ವಾಮಿ, ಮಾಲೂರು ಶಾಸಕ ಕೆ. ವೈ ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್. ಎನ್ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ದಿನಸಿ ಕಿಟ್ ಹಾಗೂ ಆರ್ಥಿಕ ನೆರವು ನೀಡಿದ್ರು. ಅಲ್ಲದೆ ಗ್ರಾಮಕ್ಕೆ ಕೋಲಾರ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಹಾಗೂ ಸಮಾಜ ಕಲ್ಯಾಣಾಧಿಕಾರಿ ಚೆನ್ನಬಸಪ್ಪ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ.
ಒಟ್ಟಾರೆ 21ನೇ ಶತಮಾನ ಕಳೆದರೂ ಕೂಡಾ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಅನ್ನೋ ಇಂಥ ಜಾತಿ ಪಿಡುಗು ಸಮಾಜದಲ್ಲಿನ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಜನರು, ಸಮಾಜ ಬದಲಾದಂತೆ ಮನಸ್ಥಿತಿಗಳು ಕೂಡಾ ಬದಲಾಗಬೇಕು. ಜಾತಿ ಅನ್ನೋ ಪಿಡುಗನ್ನು ತೊಡೆದು ಹಾಕುವಲ್ಲಿ ಜನರು ಮಾನಸಿಕವಾಗಿ ಸಿದ್ಧರಾಗಬೇಕು. ಇಲ್ಲವಾದಲ್ಲಿ ಇಂಥ ಘಟನೆಗಳು ಆಗಾಗ ಮರುಕಳಿಸೋದರಲ್ಲಿ ಅನುಮಾನವಿಲ್ಲ.
ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದ ಆರೋಪ: ಮೇಲ್ಜಾತಿಯ ಕೆಲವರಿಂದ ಬೆದರಿಕೆ