ಕೋಲಾರ: ಜಿಲ್ಲೆಯ ಹುಳ್ಳೇರಹಳ್ಳಿಯಲ್ಲಿ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ಪ್ರಕರಣ ಸಂಬಂಧ ದೌರ್ಜನ್ಯಕ್ಕೊಳಗಾದ ಕುಟುಂಬಸ್ಥರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಂತ್ವನ ಹೇಳಿದರು.
ತುಮಕೂರಿನಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದು, ದೌರ್ಜನ್ಯಕ್ಕೊಳಗಾದ ಕುಟುಂಬಸ್ಥರಿಗೆ ಕರೆಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿ ಸ್ಥಳೀಯ ಶಾಸಕ ಕೆ.ವೈ ನಂಜೇಗೌಡ ನೇತೃತ್ವದಲ್ಲಿ ಯಾತ್ರೆ ಬಳಿಗೆ ಕರೆಸಿಕೊಂಡು ಸಾಂತ್ವನ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗೆ ಇದೆ. ನಿಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಈ ವೇಳೆ ಮಾಲೂರು ಶಾಸಕ ಕೆ.ವೈ ನಂಜೇಗೌಡ, ಎ.ಎಸ್.ಎಸ್.ಕೆ ಸಂಸ್ಥಾಪಕ ಸಂದೇಶ್ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.
ಇದನ್ನೂ ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದ ಆರೋಪ: ಮೇಲ್ಜಾತಿಯ ಕೆಲವರಿಂದ ಬೆದರಿಕೆ
ಪ್ರಕರಣದ ಹಿನ್ನೆಲೆ: ಗ್ರಾಮ ದೇವತೆ ಮೆರವಣಿಗೆ ವೇಳೆ ದಲಿತ ಕುಟುಂಬಕ್ಕೆ ಸೇರಿದ ಬಾಲಕನೋರ್ವ ದೇವರನ್ನು ಮುಟ್ಟಿದ್ದಕ್ಕೆ, ಗ್ರಾಮಸ್ಥರು ರಮೇಶ್, ಶೋಭಾ ಹಾಗೂ ಅವರ ಮಗ ಚೇತನ್ಗೆೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ ಈ ಘಟನೆ ನಡೆದಿತ್ತು.
ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯವೊಂದನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭೂದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು. ಉತ್ಸವದ ವೇಳೆ ದಲಿತ ಕುಟುಂಬಕ್ಕೆ ಸೇರಿದ ಚೇತನ್ ಎಂಬ ಯುವಕ ದೇವರನ್ನು ಮುಟ್ಟಿದ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಆ ಬಾಲಕನ ಕುಟುಂಬಕ್ಕೆ 60 ಸಾವಿರ ರೂ ದಂಡ ಕಟ್ಟುವಂತೆ ಮೇಲ್ಜಾತಿಯ ಕೆಲವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. 60 ಸಾವಿರ ದಂಡ ಕಟ್ಟಿ ಇಲ್ಲವಾದಲ್ಲಿ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಗ್ರಾಮದ ಮುಖಂಡರು, ಬಾಲಕನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದರು.
ಇದನ್ನೂ ಓದಿ: ತುಮಕೂರಲ್ಲಿ 3ನೇ ದಿನದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ