ಮಾಲೂರು(ಕೋಲಾರ) : ಗಣೇಶನ ಹಬ್ಬ ಬಂತೆಂದ್ರೆ ಸಾಕು ಭಕ್ತರು ತಮ್ಮ ಮನಸ್ಸಿಗೆ ಇಷ್ಟವಾಗುವ ವಿವಿಧ ಬಗೆಯ ಗಣೇಶನನ್ನು ಕೂರಿಸಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾರೆ.
ಆದ್ರೆ, ಕೋಲಾರ ಜಿಲ್ಲೆ ಮಾಲೂರಿನ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿನ ಚಿತ್ರಕಲಾ ಶಿಕ್ಷಕ ದಯಾನಂದ್-ಕೋಮಲ ಕುಟುಂಬ ಕಳೆದ 23 ವರ್ಷಗಳಿಂದ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡು ಬಂದಿದ್ದಾರೆ.
ಗಣೇಶನ ಹಬ್ಬ ಅಂದ್ರೆ ಇದು ಹಬ್ಬ ಎನ್ನುವುದಕ್ಕಿಂತ ಇದೊಂದು ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವ ಸದವಕಾಶ ಅನ್ನೋ ಭಾವನೆ ಅವರಲ್ಲಿದೆ. ಹಾಗಾಗಿಯೇ, ಶಿಕ್ಷಕ ದಯಾನಂದ್ ತಮ್ಮ ಮನೆಯಲ್ಲಿ ಒಂದು ವಿಭಿನ್ನ ಶೆಡ್ ನಿರ್ಮಾಣ ಮಾಡಿ ಥರ್ಮಾಕೋಲ್, ಕೆಲ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ತಮ್ಮದೇ ಶೈಲಿಯಲ್ಲಿ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಬೆಳವಣಿಗೆಗಳನ್ನು ಗಣೇಶನ ಮುಂದಿಟ್ಟು ಸಮಸ್ಯೆಗಳನ್ನು ಬಗೆಹರಿಸು ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಬಾರಿ ಅಫ್ಘಾನಿಸ್ತಾವನ್ನು ಉಗ್ರರು ವಶಕ್ಕೆ ಪಡೆದ ಹಿನ್ನೆಲೆ ಅಲ್ಲಿರುವ ಭಾರತೀಯರನ್ನ ಉಗ್ರರಿಂದ ರಕ್ಷಿಸುವ ದೇವಿ ಶಕ್ತಿ ಗಣಪ, ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸುತ್ತಿರುವ ಗಣಪ, ಕೊರೊನಾ ಸಂಕಷ್ಟದ ಮಧ್ಯೆ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅಭಯ ನೀಡುತ್ತಿರುವ ಗಣಪನನ್ನ ತಮ್ಮದೆ ಶೈಲಿ, ಕಲ್ಪನೆಯಲ್ಲಿ ನಿರ್ಮಾಣ ಮಾಡಿದ್ದಾರೆ. ಕಾಬೂಲ್‌ನಲ್ಲಿ ವಿಮಾನದಿಂದ ಜನರು ಬೀಳುತ್ತಿರುವವರನ್ನ ರಕ್ಷಣೆ ಮಾಡುತ್ತಿರುವ ಗಣಪ ಸೇರಿ ಹಲವು ರೀತಿಯ ವಿಶೇಷತೆಗಳನ್ನು ಇಲ್ಲಿ ಕಾಣಬಹುದು.
ಚಿತ್ರಕಲಾ ಶಿಕ್ಷಕ ದಯಾನಂದ್, ಶಿಕ್ಷಕಿಯಾಗಿರುವ ಅವರ ಪತ್ನಿ ಕೋಮಲಾರ ಶ್ರಮ, ಶ್ರದ್ಧೆ ಅವರ ಸಮಾಜ ಪರ ಕಾಳಜಿಯಿಂದ ಇಂತಹ ಪ್ರಯತ್ನ ಯಶಸ್ವಿಯಾಗಿ ಮೂಡಿ ಬರುತ್ತಿದೆ. ವಿಶೇಷವಾಗಿ ಈ ಬಾರಿ ಕೊರೊನಾದಿಂದ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ, ಅತ್ಯಾಚಾರಿಗಳಿಗೆ ಶಿಕ್ಷೆ ನೀಡುತ್ತಿರುವ ಗಣಪ ಗಮನ ಸೆಳೆಯುತ್ತಿದೆ.
ತಮ್ಮ ಕಲೆಯನ್ನೇ ದೇವರೆಂದು ನಂಬಿರುವ ದಯಾನಂದ್ ವರ್ಷಕ್ಕೊಮ್ಮೆ ತಮ್ಮ ಕೈಯಿಂದಲೇ ಆಕರ್ಷಣೆಯ ಗಣೇಶನ ಮೂರ್ತಿಗಳನ್ನು ಮಾಡುವ ಮೂಲಕ ಸಮಾಜದ ಸಮಸ್ಯೆಗಳ ಬಗ್ಗೆ ಇರುವ ತಮ್ಮ ಕಾಳಜಿ ಪ್ರದರ್ಶಿಸುವ ಜೊತೆಗೆ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.