ಕೋಲಾರ:ಅಧಿಕಾರಕ್ಕಾಗಿ ಆಪರೇಷನ್ ಮಾಡುವ ಅಗತ್ಯ ಕಾಂಗ್ರೆಸ್ಗೆ ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಬೇಕಾದಷ್ಟು ಅಧಿಕಾರವನ್ನ ಕಾಂಗ್ರೆಸ್ ಅನುಭವಿಸಿದೆ. ದಿಢೀರ್ ಎಂದು ಅಧಿಕಾರ ಬೇಕು. ಜೈಲಿಗೆ ಹೋಗಬೇಕು ಎಂಬ ಆಸೆ ಕಾಂಗ್ರೆಸ್ಗಿಲ್ಲ ಎಂದು ಶಾಸಕ ಕೆ ವೈ ನಂಜೇಗೌಡ ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ರು.
ಜಿಲ್ಲೆಯ ಮಾಲೂರು ತಾಲೂಕಿನ ಕೊಂಡಶೆಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ಜನ ತೀರ್ಮಾನ ಕೊಟ್ರೆ ಅಧಿಕಾರಕ್ಕೆ ಬರುತ್ತೇವೆ. ಇಲ್ಲಾ ಅಂದ್ರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇವೆ. ಅದು ಬಿಟ್ಟು ಹೀಗೆ ದಿಢೀರ್ ಎಂದು ಅಧಿಕಾರಕ್ಕೆ ಬರಲ್ಲ ಎಂದರು.
ಇನ್ನೂ 17 ಅನರ್ಹ ಶಾಸಕರ ಪರಿಸ್ಥಿತಿ ಹೇಳತೀರದಂತಾಗಿದೆ. ಅವರ ಈ ಸ್ಥಿತಿಗೆ ಬಿಜೆಪಿಯೇ ಕಾರಣ. ಬಿಜೆಪಿ ಸರ್ಕಾರ ಶಾಶ್ವತ ಅಲ್ಲ. ಹಾಗಾಗಿ ನಾವಂತೂ ಚುನಾವಣೆಗೆ ಸಿದ್ದರಾಗಿದ್ದೇವೆ. ನನ್ನ ಪ್ರಕಾರ ಮುಂದಿನ ತಿಂಗಳು ಬೈ ಎಲೆಕ್ಷನ್ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಬಂದ್ರೆ ಅಚ್ಚರಿ ಪಡಬೇಕಿಲ್ಲ. ಅನರ್ಹ ಶಾಸಕರ ಪರಿಸ್ಥಿತಿ ನೋಡಿದ್ರೆ ನೋವಾಗುತ್ತೆ. ಪಾಪ ಅವರಿಗೆ ಅನ್ಯಾಯವಾಗಿದೆ. ಬಿಜೆಪಿ ಅನರ್ಹ ಶಾಸಕರಿಗೆ ಮೋಸ ಮಾಡಿದೆ ಎಂದು ಕಿಡಿಕಾರಿದರು.