ಕೋಲಾರ: ಚೆನ್ನೈ- ಬೆಂಗಳೂರು ಹೆದ್ದಾರಿ ನಿರ್ಮಾಣ ಯೋಜನೆಗಾಗಿ ಕಳೆದುಕೊಂಡಿರುವ ಭೂಮಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಮೂವರು ರೈತರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಎಸ್ ಗೊಲ್ಲಹಳ್ಳಿ ಹಾಗೂ ವಡಗೆರೆ ಗ್ರಾಮದಲ್ಲಿ ಶನಿವಾರ ನಡೆದಿದೆ. ರೈತರ ಕೃಷ್ಣಮೂರ್ತಿ, ಅವರ ತಂದೆ ವೆಂಕಟೇಶಪ್ಪ ಹಾಗೂ ಅಭಿಜಿತ್ ಗೌಡ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೇ ವೇಳೆ, ಸ್ಥಳದಲ್ಲೇ ಇದ್ದ ಪೊಲೀಸರು ತಮ್ಮದೇ ವಾಹನದಲ್ಲಿ ಆತ್ಮಹತ್ಯೆಗೆ ಯತ್ನಿಸಿದವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ.
ಕೋಲಾರ ಜಿಲ್ಲೆಯ ಮೂರು ತಾಲೂಕಿನಲ್ಲಿ ಚೆನ್ನೈ ಎಕ್ಸ್‌ಪ್ರೆಕ್ಸ್ ಹೈವೇ ಹಾದು ಹೋಗಲಿದೆ. ಈ ಪ್ರದೇಶಗಳಲ್ಲಿ ಭೂಸ್ವಾಧಿನ ಪ್ರಕ್ರಿಯೆ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ ಎಂದು ರೈತರು ಆರೋಪಿಸಿದರು.
ರೈತರು ಹೇಳಿದ್ದೇನು?: ''ಜಮೀನು ಕಳೆದುಕೊಂಡ ರೈತರನ್ನು ಬಿಟ್ಟು ಬೇರೆ ಯಾರಿಗೋ ಪರಿಹಾರ ನೀಡಿದ್ದಾರೆ ಎಂದು ಆರೋಪಿಸಿದ ಮೂವರು ರೈತರು ಅಧಿಕಾರಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಸ್. ಗೊಲ್ಲಹಳ್ಳಿ ಗ್ರಾಮದ ಬಳಿ ಆರೋಹಳ್ಳಿ ನಿವಾಸಿ ಕೃಷ್ಣಮೂರ್ತಿ ನಾಲ್ಕು ಎಕರೆ ಭೂಮಿ ಹಾಗೂ ಲಕ್ಷ್ಮೀಪುರ ಗ್ರಾಮದ ಅಭಿಜಿತ್ಗೌಡ ಮೂರು ಎಕರೆ ಭೂಮಿಗೆ ಪರಿಹಾರ ನೀಡಿಲ್ಲ. ಹಲವು ಬಾರಿ ಅಧಿಕಾರಿಗಳನ್ನು ಕೇಳಲಾಗಿದೆ. ತಮ್ಮ ಹೆಸರಲ್ಲಿ ಭೂಮಿ ಇದೆ. ಅದ್ರೆ, ಅಧಿಕಾರಿಗಳು ಬೇರೆ ಯಾರಿಗೂ ಪರಿಹಾರ ನೀಡಿದ್ದಾರೆ. ನಿಮ್ಮದು ಜಮೀನೇ ಇಲ್ಲಾ ಎಂದಿದ್ದಾರೆ. ಅಲ್ಲದೇ ಈ ವಿಚಾರವನ್ನು ಕೋರ್ಟ್ನಲ್ಲಿ ಇತ್ಯರ್ಥಿಪಡಿಸಿಕೊಳ್ಳಿ ಎಂದು ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ'' ಎಂದು ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಸೌಮ್ಯ ಆರೋಪಿಸಿದರು.
''ಕೋಲಾರ ತಾಲ್ಲೂಕು ಎಸ್. ಗೊಲ್ಲಹಳ್ಳಿ, ಮಾಲೂರು ತಾಲ್ಲೂಕು ಲಕ್ಷ್ಮೀಸಾಗರ, ಹೊಂಗೇನಹಳ್ಳಿ, ಬಂಗಾರಪೇಟೆ ತಾಲ್ಲೂಕು, ಕೆಜಿಎಫ್ ತಾಲ್ಲೂಕು ಎನ್.ಜಿ. ಹುಲ್ಕೂರು ಸೇರಿ ಹಲವೆಡೆ ಹೆದ್ದಾರಿ ಪ್ರಾಧಿಕಾರ ರೈತರ ಜಮೀನುಗಳನ್ನು ವಶಕ್ಕೆ ಪಡೆದುಕೊಂಡು ಈವರೆಗೂ ಪರಿಹಾರ ನೀಡಿಲ್ಲ. ಜೊತೆಗೆ ಭೂಮಿಯಲ್ಲಿದ್ದ ಮರಗಿಡಳಗಿಗೂ ಇನ್ನೂ ಪರಿಹಾರ ಕೊಟ್ಟಿಲ್ಲ. ಈ ಕುರಿತು ಕಳೆದ ಒಂದು ವರ್ಷದಿಂದ ಹಲವು ರೀತಿಯಲ್ಲಿ ಹೋರಾಟ ಕೈಗೊಳ್ಳಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ'' ಎಂದು ಅವರು ಕಿಡಿಕಾರಿದರು.
ಶಾಸಕ ಕೆ ವೈ ನಂಜೇಗೌಡ ಭೇಟಿ: ಇನ್ನು ವಿಷಯ ತಿಳಿದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿದರು. ರೈತರ ಆರೋಗ್ಯ ವಿಚಾರಿಸಿದರು. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ರೈತರಿಗೆ ಶೀಘ್ರ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ ಹೊರತು ನಾವಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ