ಕೋಲಾರ: ಕೊರೊನಾ ತಡೆಗಟ್ಟುವಲ್ಲಿ ಮೋದಿ ಹಾಗೂ ಯಡಿಯೂರಪ್ಪ ಅವರು ವಿಫಲರಾಗಿದ್ದು, ಇವರಿಬ್ಬರು ಈ ಕೂಡಲೇ ರಾಜೀನಾಮೆ ನೀಡಿ ಮನೆಯಲ್ಲಿರಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಆಗ್ರಹಿಸಿದ್ದಾರೆ.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶವನ್ನ 50 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದು, ಸರ್ಕಾರ ಮುಂದುವರೆಸುವ ಅರ್ಹತೆ ಅವರಿಗಿಲ್ಲ ಎಂದರು.
ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದ್ದು, ಅಂತಾರಾಷ್ಟ್ರೀಯ ಏರ್ಲೈನ್ಸ್ಗೆ ನಿರ್ಬಂಧ ಹೇರಿದ್ದರೆ ಇಷ್ಟೊಂದು ಅವಾಂತರ ಆಗುತ್ತಿರಲಿಲ್ಲ ಎಂದರು. ಈ ಹಿಂದೆ ತಜ್ಞರು ಹೇಳಿದರೂ ಸಹ ಸರ್ಕಾರ ಕ್ರಮವಹಿಸಿಲ್ಲ, ಜನ ಸತ್ತ ನಂತರ ಕ್ರಮವಹಿಸಲು ಮುಂದಾಗಿದ್ದಾರೆ. ಹೀಗಾಗಿ ಮೋದಿ ಅವರು ಕೂಡಲೇ ರಾಜೀನಾಮೆ ಕೊಟ್ಟು ದೇಶವನ್ನ ಉಳಿಸಬೇಕು ಎಂದಿದ್ದಾರೆ.
ಯಡಿಯೂರಪ್ಪ ಅವರಿಗೆ ಸುಧಾರಣೆ ಮಾಡಲು ಆಗುತ್ತಿಲ್ಲ, ಪರಿಸ್ಥಿತಿ ಕೈ ಮೀರಿ ಹೋಗಿದ್ದು ಅವರು ಸಹ ರಾಜೀನಾಮೆ ಕೊಟ್ಟು ಮನೆಯಲ್ಲಿಯೇ ಇರಲಿ ಎಂದು ಆಗ್ರಹ ಮಾಡಿದರು.
ಧಮ್ ಇದ್ರೆ ನನ್ನನ್ನೂ ಬಂಧಿಸಲಿ:
ಕಾಂಗ್ರೆಸ್ಸಿನವರು ಪತ್ರ ಚಳುವಳಿ ಮಾಡುತ್ತಿರುವುದರಿಂದ, ಕೈ ನಾಯಕರನ್ನ ಬಂಧಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲಿ ಕೋಟ್ಯಾಂತರ ಕಾರ್ಯಕರ್ತರು ಇದ್ದು, ಅವರಿಗೆ ಧಮ್ ಇದ್ದರೆ, ಧೈರ್ಯ ಇದ್ದರೆ ಕಾರ್ಯಕರ್ತರೊಂದಿಗೆ ನನ್ನನ್ನೂ ಸಹ ಬಂಧಿಸಲಿ ಎಂದು ಸವಾಲ್ ಹಾಕಿದರು.