ಕೋಲಾರ: ಸ್ವತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಚಿನ್ನದ ನಾಡು ಕೋಲಾರದಲ್ಲಿ ಕಮಲ ಅರಳಿದೆ. ಈವರೆಗೆ ನಡೆದ 17 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಇದೇ ಮೊದಲು ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಂಡಿದೆ.
ಕೋಲಾರದಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಗೆದ್ದ ಇತಿಹಾಸವೇ ಇರಲಿಲ್ಲ. ಕೋಲಾರದಿಂದ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸೋಲಿಲ್ಲದ ಸರದಾರ ಕೆ.ಹೆಚ್ ಮುನಿಯಪ್ಪ ಈ ಬಾರಿ ಅಪಜಯ ಕಂಡಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದು ಜಯಸಿರುವ ಎಸ್. ಮುನಿಸ್ವಾಮಿ ಹೊಸ ಇತಿಹಾಸ ಬರೆದಿದ್ದಾರೆ.
ಬೆಂಗಳೂರು ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದ ಎಸ್.ಮುನಿಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸಿ 2,11,707ಮತಗಳ ಭಾರಿ ಅಂತರದಿಂದ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಕೋಲಾರದಿಂದಲೇ ಏಳು ಬಾರಿ ಸಂಸದರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ ಹೀನಾಯವಾಗಿ ಸೋತಿದ್ದಾರೆ.
ಮತ ಎಣಿಕೆ ವೇಳೆ ಪ್ರತಿ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದರಿಂದ ಕಸಿವಿಗೊಂಡ ಮುನಿಯಪ್ಪ ಮತ ಎಣಿಕೆ ನಡೆಯುತ್ತಿದ್ದ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸಿದ್ರು. ಕೊನೆಗೆ ತಮ್ಮ ಗೆಲುವು ಅಸಾಧ್ಯ ಎಂಬುದು ತಿಳಿದ ಮೇಲೆ, ನಗುಮುಖದಿಂದಲೇ ಸೋಲನ್ನು ಒಪ್ಪಿಕೊಂಡರು. ಈ ವೇಳೆ ಮಾತನಾಡಿದ ಅವರು, ಮತದಾರರ ತೀರ್ಪಿಗೆ ಬದ್ದ. ಆದರೆ ಇವಿಎಂಗಳ ಮೇಲೆ ನಮಗೆ ನಂಬಿಕೆ ಇಲ್ಲ. ಮೋದಿ ಏನೋ ಮ್ಯಾಜಿಕ್ ಮಾಡಿದ್ದಾರೆ ಎಂದು ಆರೋಪಿಸಿದರು.