ಕೋಲಾರ: ಗ್ರಾಮಸ್ಥರ ಆರೋಪಕ್ಕೆ ಕೈಗನ್ನಡಿಯಂತೆ ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಸತಿ ನಿಲಯದ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ.
ಹೋಳೂರು ಗ್ರಾಮದಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಸತಿ ನಿಲಯವಿದೆ. ಇದಕ್ಕೆ ಈ ಮೊದಲು ಒಂದು ಕಲ್ಲು ಚಪ್ಪಡಿಯ ಕಾಂಪೌಂಡ್ ಇತ್ತು. ಆದರೆ ಬಿಸಿಎಂ ಇಲಾಖೆ ಹಾಗೂ (KRIDL) ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ಅಧಿಕಾರಿಗಳು ಸುಸಜ್ಜಿತವಾಗಿದ್ದ ಹಾಸ್ಟೆಲ್ಗೆ ಹಾಲೋಬ್ರಿಕ್ಸ್ ಸಿಮೆಂಟ್ ಗೋಡೆ ಹಾಗೂ ಮಳೆ ನೀರು ಕೊಯ್ಲು ಅಳವಡಿಕೆಗೆಂದು 60 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ.
ಆದರೆ ಈ ಕೆಲಸ ಮುಗಿಯುವ ಮೊದಲೇ ಹಣ ಡ್ರಾ ಮಾಡಿರುವ ಅಧಿಕಾರಿಗಳು ಅತ್ಯಂತ ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ಕುಸಿದು ಬಿದ್ದಿದೆ. ಇದರಿಂದ ಆಕ್ರೋಶಗೊಂಡಿರುವ ಹೋಳೂರು ಗ್ರಾಮಸ್ಥರು ಬಿಸಿಎಂ ಇಲಾಖೆ ಹಾಗೂ ಕ್ರೆಡಿಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಾವಶ್ಯಕವಾಗಿ ಸರ್ಕಾರದ ಹಣ ದುರುಪಯೋಗ ಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 'ನನ್ನ ತಂಟೆಗೆ ಬರಬೇಡಿ, ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ'
ಗೋಡೆ ಭಾನುವಾರ ಬೆಳಗಿನ ಜಾವದಲ್ಲಿ ಕುಸಿದು ಬಿದ್ದಿದ್ದು, ಸ್ಥಳದಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ನಿತಿನ್ ಗೌಡ ಎಂಬ ವ್ಯಕ್ತಿ ಕಾಮಗಾರಿ ಮಾಡಿಸುತ್ತಿದ್ದು, ಅಧಿಕಾರಿಗಳು ಬಿಲ್ನಲ್ಲಿ ಅಕ್ರಮ ಎಸಗಿದ್ದಾರೆ ಎಮದು ಗ್ರಾಮಸ್ಥರು ಆರೋಪಿಸಿದ್ದಾರೆ.