ಕೋಲಾರ: ಲಾಕ್ಡೌನ್ ಹಿನ್ನೆಲೆ ಮಲೇಷ್ಯಾದಲ್ಲಿ ಕನ್ನಡಿಗರು ಸಿಲುಕಿದ್ದು, ಜಿಲ್ಲೆಯ ಭಾರ್ಗವ್ ಎಂಬಾತ ತಮ್ಮನ್ನು ರಕ್ಷಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೋರಿದ್ದಾನೆ.
ಕೋಲಾರ ಮೂಲದ ಭಾರ್ಗವ್ ಎಂಬಾತ ಕಳೆದೆರಡು ತಿಂಗಳ ಹಿಂದೆ ಇಂಟರ್ನ್ಶಿಪ್ ಕಾರ್ಯಕ್ರಮದಡಿ ಮಲೇಷ್ಯಾಗೆ ಹೋಗಿದ್ದು, ಲಾಕ್ಡೌನ್ ಹಿನ್ನೆಲೆ ಭಾರತಕ್ಕೆ ಹಿಂತಿರುಗಲಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಿಯಾಗಿ ಅನ್ನ-ನೀರು ಸಿಗದೆ ಸಾಕಷ್ಟು ಸಂಕಷ್ಟವನ್ನ ಎದುರಿಸುತ್ತಿದ್ದು, ದಿನದಲ್ಲಿ ಒಂದು ಬಾರಿ ಮಾತ್ರ ಸಿಗುವ ಅನ್ನ ನೀರಿನಲ್ಲಿ ಕಾಲ ಕಳೆಯುವಂತಾಗಿದೆ. ಇದ್ದ ಹಣವನ್ನೆಲ್ಲಾ ಊಟಕ್ಕಾಗಿ ಖರ್ಚು ಮಾಡಿದ್ದು, ಇದೀಗ ಕೈಯಲ್ಲಿ ಬಿಡುಗಾಸಿಲ್ಲದೇ, ಸರಿಯಾದ ಸಮಯಕ್ಕೆ ಊಟವಿಲ್ಲದೆ ಇತ್ತ ಭಾರತಕ್ಕೂ ಹಿಂತಿರುಗಲಾಗದೆ ಗೋಗರೆಯುತ್ತಿದ್ದಾರೆ.
ಇನ್ನು ಇಷ್ಟೆಲ್ಲಾ ಸಂಕಷ್ಟದಲ್ಲಿ ಇದ್ದರೂ ಕೂಡಾ ಮಲೇಷ್ಯಾ ಸರ್ಕಾರ ಮಾತ್ರ ಇವರ ಸಹಾಯಕ್ಕೆ ಬಂದಿಲ್ಲ ಎಂದು ಅರೋಪಿಸುತ್ತಿರುವ ಭಾರ್ಗವ್, ತಮ್ಮಂತೆ ನೂರಾರು ಜನ ಕನ್ನಡಿಗರು, ಅದರಲ್ಲೂ ಮಕ್ಕಳು ಗರ್ಭಿಣಿಯರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನುವಂತಹದ್ದನ್ನ ತಿಳಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.