ಕೋಲಾರ: ತಾಲೂಕಿನ ಹೊನ್ನೇನಹಳ್ಳಿ ಕಾಲೋನಿ ರಸ್ತೆ ವಿವಾದ ಸಖತ್ ಸದ್ದು ಮಾಡುತ್ತಿದೆ. ರಾತ್ರೋರಾತ್ರಿ ಅಂಬೇಡ್ಕರ್ ಭಾವಚಿತ್ರ ತಲೆ ಎತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ. ಇದರಿಂದ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಹರಸಾಹಸ ಪಟ್ಟಿದ್ದಾರೆ.
ಏನಿದು ವಿವಾದ?: ಗ್ರಾಮದಲ್ಲಿರುವ ಈ ವಿವಾದಿತ ರಸ್ತೆಗೆ ಕಳೆದ ರಾತ್ರಿ ಸಂಸದರ ಅನುದಾನದಲ್ಲಿ ಸಿಸಿ ರಸ್ತೆಗೆ ವೆಟ್ ಮಿಕ್ಸ್ ಹಾಕಲಾಗಿತ್ತು. ಇನ್ನೇನು ಕಾಂಕ್ರೀಟ್ ಮಾಡಬೇಕಿದ್ದ ರಸ್ತೆ ಮಧ್ಯೆ ಗ್ರಾಮದ ದಲಿತರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ನಿರ್ಮಾಣ ಮಾಡಿದ್ದಾರೆ.
ರಸ್ತೆ ನಿರ್ಮಾಣಕ್ಕೆ ತಕರಾರಿಲ್ಲ. ಆದರೆ ಮೇಲ್ಜಾತಿಯ ಕುಟುಂಬಗಳಿರುವ ಕಡೆ ಹಿಂದಿಳಿದ ವರ್ಗಗಳ ಕಾಲೋನಿ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಹಾಕಲಾಗಿದೆ. ಜೊತೆಗೆ ಸವರ್ಣೀಯರು ರಸ್ತೆ ನಿರ್ಮಾಣಕ್ಕೆ ಅಡ್ಡಗಾಲುಹಾಕಿದ್ದಾರೆ. ರಸ್ತೆ ಮಾಡಿದರೆ ಎಲ್ಲೆಡೆ ಮಾಡಿ, ಇಲ್ಲವಾದಲ್ಲಿ ರಸ್ತೆ ಮಾಡುವುದೇ ಬೇಡ ಎಂದು ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿ ರಸ್ತೆ ಮಧ್ಯೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು: ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ರಸ್ತೆ ಮಾಡುವುದಕ್ಕೆ ತಕರಾರಿಲ್ಲ. ಆದ್ರೆ ಮಾಡಿದ್ರೆ ಎಲ್ಲೆಡೆ ಮಾಡಿ ಇಲ್ಲವಾದಲ್ಲಿ ಕಾಮಗಾರಿ ನಿಲ್ಲಿಸಿ ಎಂದು ಗ್ರಾಮದ ಆಗ್ರಹಿಸಿದ್ದಾರೆ.
ಈ ರಸ್ತೆಯನ್ನು ಆರ್‌ಡಿಪಿಆರ್ ಅನುದಾನದಲ್ಲಿ ಸುಮಾರು 5 ಲಕ್ಷ ವ್ಯಯ ಮಾಡಿ ಮಾಡಲಾಗುತ್ತಿದೆ. ಇದಕ್ಕೂ ಪಂಚಾಯತಿಗೂ ಯಾವುದೇ ಸಂಬಂಧವಿಲ್ಲ. ನಾವು ಯಾವುದೇ ಅನುಮತಿ ನೀಡಿಲ್ಲ ಅನ್ನೋದು ಪಂಚಾಯಿತಿ ಅಧಿಕಾರಿಗಳ ಮಾತು.
ಶುಕ್ರವಾರ ಮಧ್ಯಾಹ್ನದ ನಂತರ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ತಾಲೂಕು ಪಂಚಾಯತ್ ಇ.ಒ ಮುನಿಯಪ್ಪ ಹಾಗೂ ಕೋಲಾರ ಗ್ರಾಮಾಂತರ ವೃತ್ತ ನಿರೀಕ್ಷಕ ಐಯಣ್ಣ ರೆಡ್ಡಿ ರಸ್ತೆ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಸಮ್ಮುಖದಲ್ಲಿ ಅಂಬೇಡ್ಕರ್ ಭಾವಚಿತ್ರ ಗ್ರಾಮಸ್ಥರು ತೆಗೆಯುವ ಮೂಲಕ ರಸ್ತೆ ವಿವಾದ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: ಶೌಚಾಲಯದಲ್ಲಿ ಮಗು ಕೂಡಿ ಹಾಕಿದ ಪ್ರಕರಣ: ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ವಜಾಕ್ಕೆ ಶಿಫಾರಸು