ಕೋಲಾರ: ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಕೆಂದಟ್ಟಿಗ್ರಾಮದ ಕೆರೆಯಲ್ಲಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಅಲ್ಲದೇ ಕೆರೆಯ ದಡದಲ್ಲೇ ಒಂದು ನೀಲಿ ಬಣ್ಣದ ಐ20 ಕಾರ್ ಸಹ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಕಾರು ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಗುಜರಾತ್ ಮೂಲದ ಕುಟುಂಬದವರದ್ದು ಎಂಬುವ ಮಾಹಿತಿ ದೊರೆತಿದೆ.
ಈ ಕುರಿತು ಪೊಲೀಸರು ಕುಟುಂಬದವರಿಗೆ ತಿಳಿಸಿದಾಗ ಸ್ಥಳಕ್ಕೆ ಬಂದ ಭವ್ಯ ಎಂಬುವವರು ಇದು ನನ್ನ ಪತಿಯ ಕಾರು, ಆಕೆ ನನ್ನ ಮಗಳು ಎಂದು ಅಳತೊಡಗಿದ್ದಾರೆ. ನಿನ್ನೆ ಬೆಳಗ್ಗೆ ನನ್ನ ಪತಿ ರಾಹುಲ್ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದೇ ಇಲ್ಲ. ಅದಾದ ನಂತರ ಪೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸರಿಂದ ಅವರ ಇಲ್ಲಿಗೆ ಬಂದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಭವ್ಯಾ ಎಂಬುವರು ಹೇಳಿದ್ದಾರೆ. ರಾಹುಲ್ ಪತ್ನಿ ಭವ್ಯ ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನು ರಾಹುಲ್ನ ಮೊಬೈಲ್, ಪರ್ಸ್ ಎಲ್ಲವೂ ಕಾರಿನಲ್ಲೇ ಇದ್ದು, ರಾಹುಲ್ ತನ್ನ ಮಗುವನ್ನು ಕೊಂದು ತಾನೂ ಕೂಡಾ ಇದೇ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೆರೆಯಲ್ಲಿ ರಾಹುಲ್ ಶವಕ್ಕಾಗಿ ಶೋಧ ಕೈಗೊಂಡಿದ್ದಾರೆ.
ಪ್ರಕರಣ ಕುರಿತು ಮಾಧ್ಯಮದವರೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಇತ್ತೀಚೆಗೆ ರಾಹುಲ್ ಬಾಗಲೂರು ಪೊಲೀಸ್ ಠಾಣೆಗೆ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ನೀಡಿರುತ್ತಾರೆ.
ಅಷ್ಟೇ ಅಲ್ಲದೆ ದೂರು ಸಲುವಾಗಿ ಪದೇ ಪದೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿರುತ್ತಾರೆ. ಆಗ ಪೊಲೀಸರು ದೂರಿನ ಪರಿಶೀಲನೆ ನಡೆಸಿದಾಗ, ರಾಹುಲ್ ತಾನೇ ಮನೆಯಲ್ಲಿದ್ದ ಒಡವೆಗಳನ್ನು ಚೆಮನೂರ್ ಜ್ಯೂವೆಲರ್ಸ್ನಲ್ಲಿ ಅಡವಿಟ್ಟು, ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಬಳಿಕ ಪೊಲೀಸರು ರಾಹುಲ್ಗೆ ಠಾಣೆಗೆ ಬರುವಂತೆ ಸೂಚಿಸಿ ಅವರ ಮನೆಯ ಬಳಿಯೂ ಹೋಗಿ ಠಾಣೆಗೆ ಬರುವಂತೆ ತಾಕೀತು ಮಾಡಿದ್ದರು. ಈ ವಿಚಾರವಾಗಿಯೇ ಭಯ ಪಟ್ಟು ರಾಹುಲ್ ಈ ರೀತಿ ಮಾಡಿಕೊಂಡಿರಬಹುದಾ ಎಂಬ ಅನುಮಾನ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಐಟಿ ಉದ್ಯೋಗಿಯಾಗಿದ್ದ ರಾಹುಲ್ ಏಕಾಏಕಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ, ಪೊಲೀಸರ ಭಯಕ್ಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ, ಇಲ್ಲಾ ಸಾಲದ ಸುಳಿಗೆ ಸಿಲುಕಿ ಇಂತಹ ನಿರ್ಧಾರ ಮಾಡಿದ್ದಾರಾ, ಬೇರೆ ಏನಾದರೂ ಕಾರಣ ಇದೆಯಾ, ಅಥವಾ ರಾಹುಲ್ ಮಗುವನ್ನು ಕೊಂದು ತಾನು ಎಲ್ಲಾದ್ರು ತಲೆಮರೆಸಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ಫಿಂಗರ್ ಫ್ರಿಂಟ್ ಆ್ಯಪ್: 12 ವರ್ಷದ ಬಳಿಕ ಪತ್ತೆಯಾದ ಕೊಲೆ ಆರೋಪಿ