ಕೊಡಗು: ಪತ್ನಿ ಹಾಗೂ ಮಗಳು ಸೇರಿ ನ್ಯಾಯಾಲಯದಲ್ಲಿ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕ ಗ್ರಾಮದ ನಿವಾಸಿ ಭರತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಸುಮಾರು 20 ವರ್ಷಗಳ ಹಿಂದೆ ರತ್ನ ಎಂಬುವರನ್ನ ವಿವಾಹವಾಗಿದ್ದ ಭರತ್ ಸಂಸಾರ ಚೆನ್ನಾಗಿಯೆ ಇತ್ತು. ಇಬ್ಬರು ಹೆಣ್ಣು ಮಕ್ಕಳಿದ್ದು, ಒಟ್ಟಿಗೆ ಆನಂದವಾಗಿದ್ದರು. ಆದರೆ ಮಕ್ಕಳು ದೊಡ್ಡವರಾದಂತೆ ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ಈ ನಡುವೆ ಪತ್ನಿ, ಪತಿಯೇ ಮೊದಲ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ, ಹಾಗೂ 2ನೇ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ದೂರಿನ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಭರತ್ಗೆ 14 ವರ್ಷ ಜೈಲಾಗುತ್ತದೆ. ಆದರೆ ಹೈಕೋರ್ಟ್ನಲ್ಲಿ ಭರತ್ ಮೇಲ್ಮನವಿ ಸಲ್ಲಿಸಿ ಆರೋಪ ಮುಕ್ತರಾಗಿ ಹೊರಬಂದಿರುತ್ತಾರೆ.
ಕೊನೆಗೆ 2019ರಲ್ಲಿ ಭರತ್ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಆದರೆ ಅಲ್ಲಿಯೂ ಪತ್ನಿ ತನ್ನಿಬ್ಬರು ಮಕ್ಕಳನ್ನು ಸಾಕಲು 60 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ.
ನ್ಯಾಯಾಲಯದಿಂದ ಆರೋಪ ಮುಕ್ತನಾಗಿ ಬಂದಿದ್ದರೂ ಭರತ್ಗೆ ಮಾನಸಿಕ ಕಿರುಕುಳ ಮುಂದುವರಿದಿತ್ತಂತೆ. ಜನರು ಕೂಡ ಅಪರಾಧಿಯಂತೆ ನೋಡುತ್ತಿದ್ದರಂತೆ ಇದರಿಂದ ಬೇಸತ್ತ ಭರತ್ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ರಸ್ತೆಯಲ್ಲಿ ಹೋಗ್ತಿದ್ದ ಪುಟ್ಟ ಬಾಲಕಿ ಮೇಲೆರಗಿದ ಬೀದಿ ನಾಯಿ!