ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲುರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿ ಮುಂದುವರೆದಿದೆ. ಮಲ್ಲಮಾಡ ಉಷಾ ಎಂಬುವವರಿಗೆ ಸೇರಿದ ಹಸುವನ್ನು ಕೊಟ್ಟಿಗೆಗೆ ನುಗ್ಗಿದ ವ್ಯಾಘ್ರ ಕೊಂದು ಹಾಕಿದೆ.
ಈ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಪೊನ್ನಂಪೇಟೆ ಭಾಗದಲ್ಲಿ ಮನುಷ್ಯರ ಮೇಲೆ ಹುಲಿ ದಾಳಿ ಮಾಡಿತ್ತು. ಅಲ್ಲದೇ 15ಕ್ಕೂ ಹೆಚ್ಚು ಹಸುಗಳನ್ನು ಕೊಂದು ಹಾಕಿತ್ತು.
ಈ ದಾಳಿಯ ನಂತರ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆಯವರು ಗುಂಡಿಟ್ಟು ಕೊಂದಿದ್ದಾರೆ ಎಂಬ ಸುದ್ದಿ ಹರಡಿ ಜನ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಆದ್ರೀಗ ಮತ್ತೆ ಹಸುಗಳ ಮೇಲೆ ದಾಳಿ ಮುಂದುವರೆದಿದ್ದು ಸ್ಥಳೀಯರ ಆತಂಕ ಹೆಚ್ಚಿಸಿದೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ಭಾಗದಲ್ಲಿ ಎರಡು ದಿನಗಳ ಹಿಂದಷ್ಟೇ ಆನೆ ದಾಳಿಮಾಡಿತ್ತು. ಪೊನ್ನಂಪೇಟೆ ರಸ್ತೆಯಲ್ಲಿ 10 ಕ್ಕೂ ಹೆಚ್ಚು ಆನೆಗಳು ರಸ್ತೆ ದಾಟಿ ಜನರಲ್ಲಿ ಭಯ ಉಂಟುಮಾಡಿದ್ದವು. ಈಗ ಈ ಭಾಗದಲ್ಲಿ ಜನರು ವ್ಯಾಘ್ರನ ಉಪಟಳ ಎದುರಿಸುತ್ತಿದ್ದಾರೆ.
ಕಾಡುಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯುವಲ್ಲಿ ಆರಣ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ಅವು ನಾಡಿಗೆ ಬಂದು ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ಕಾಡುಪ್ರಾಣಿಗಳು ತೊಂದರೆ ನೀಡುವುದನ್ನು ಅರಣ್ಯ ಇಲಾಖೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘಟನೆ ಅರಣ್ಯ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಲಾಕ್ಡೌನ್ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಜಿಲ್ಲಾ ಪ್ರವಾಸಕ್ಕೆ ತೆರಳಿದ ಸಿಎಂ ಬಿಎಸ್ವೈ