ಕೊಡಗು : ದಕ್ಷಿಣ ಕೊಡಗಿನಲ್ಲಿ 3 ಜನರನ್ನು ಬಲಿ ಪಡೆದ ನರ ಭಕ್ಷಕ ಹುಲಿಯನ್ನು 23 ದಿನಗಳಾದ್ರೂ ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ವಿಫಲವಾಗಿದೆ. ಶೀಘ್ರ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಮಡಿಕೇರಿಯಲ್ಲಿ 1ಗಂಟೆ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದರು.
ಘಟನೆ ನಡೆದು ಇಂದಿಗೆ 23 ದಿನ ಕಳೆದಿದೆ. ಬೆಳ್ಳೂರು ಭಾಗದಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದರುೂ ಅರಣ್ಯ ಸಚಿವರು ಮಾತ್ರ ಇಲ್ಲಿಗೆ ಬರುವ ಮನಸ್ಸು ಮಾಡಿಲ್ಲ. ಕೊಡಗು ಜಿಲ್ಲಾಡಳಿತ ಕೂಡ ಈ ಭಾಗದ ಜನರನ್ನ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೋರಾಟಗಾರರು ಆಕ್ರೋಶ ಹೊರ ಹಾಕಿದರು.
ಈಗಾಗಲೇ ಮೂರು ನರ ಬಲಿಯಾಗಿವೆ.17ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಇನ್ನೋರ್ವ ವ್ಯಕ್ತಿ ಹುಲಿ ದಾಳಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇಷ್ಟಾದ್ರೂ ಅರಣ್ಯ ಇಲಾಖೆ ಮಾತ್ರ ಹುಲಿ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.
ಅರಣ್ಯ ಇಲಾಖೆ ಹುಲಿ ಕಾರ್ಯಾಚರಣೆ ಮಾಡುವಾಗ ನಮ್ಮ ತೋಟದಲ್ಲಿ ಆನೆ ಕಾರ್ಯಾಚರಣೆ ನಡೆಸಿ ತೋಟದ ಕೃಷಿ ಬೆಳೆ ಕೂಡ ನಾಶವಾಗಿದೆ. ಅರಣ್ಯ ಇಲಾಖೆ ಹುಲಿಯನ್ನ ಹಿಡಿಯಿರಿ, ಇಲ್ಲ ಅದನ್ನ ಗುಂಡಿಕ್ಕಿ ಕೊಲ್ಲಿ, ಇಲ್ಲ ನಮಗೆ ಅನುಮತಿ ಕೊಡಿ ಎಂದು ಆಗ್ರಹಿಸಿದರು.