ಕೊಡಗು: ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಸೋಂಕಿತರ ಸಂಖ್ಯೆ ಕೊಡಗಿನಲ್ಲಿ ಕಡಿಮೆ ಇದ್ದರೂ ವೈರಸ್ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ.
ನಿನ್ನೆ ಸಂಜೆಯೇ ಮೃತಪಟ್ಟಿದ್ದ ಕುಶಾಲನಗರದ 58 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಂದು ವಾರದಿಂದಲೇ ರೋಗ ಲಕ್ಷಣವಿದ್ದರೂ ಅವರು ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಗೆ ಬಂದ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದಾರೆ.
ಕೊರೊನಾ ರೋಗ ಲಕ್ಷಣಗಳು ಇದ್ದಿದ್ದರಿಂದ ವೈದ್ಯರು ಮೃತ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ ಕೊರೊನಾ ಟೆಸ್ಟ್ಗೆ ಕಳುಹಿಸಿದ್ದರು. ವರದಿ ಬರುವುದು ತಡವಾಗಿದ್ದರಿಂದ ಕೊಡಗು ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿ ಅನ್ವಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸದೆ ಮಡಿಕೇರಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಿತ್ತು.
ಸದ್ಯ ವ್ಯಕ್ತಿಯ ವರದಿ ಬಂದಿದ್ದು, ಕೊರೊನಾದಿಂದಲೇ ಮೃತಪಟ್ಟಿರುವುದು ದೃಢವಾಗಿದೆ. ಮತ್ತೊಂದು ಆತಂಕಕಾರಿ ವಿಷಯವೆಂದರೆ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಯಾವ ಪಟ್ಟಣ, ಊರುಗಳಿಗೂ ಪ್ರಯಾಣಿಸಿಲ್ಲ. ಆದರೂ ಕೊರೊನಾ ತಗುಲಿದೆ. ಹೀಗಾಗಿ ಕೊರೊನಾ ಸಮುದಾಯದಲ್ಲಿ ಹರಡುತ್ತಿದೆಯಾ ಎನ್ನುವ ಅನುಮಾನ ಮೂಡಿಸಿದೆ.
ಒಟ್ಟಿನಲ್ಲಿ ಇದುವರೆಗೆ ಕೊಡಗಿನಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ ವೇಗವಾಗಿ ಹಬ್ಬುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.