ಕೊಡಗು: ಪ್ರಕೃತಿ ಸೌಂದರ್ಯದ ಶ್ರೀಮಂತ ಜಿಲ್ಲೆ ಕೊಡಗಿನಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳಿಂದ ಗಮನ ಸೆಳೆಯುತ್ತಿರುವ ಕೊಡಗಿನಲ್ಲಿ ಜಿಂಕೆ ಕೊಂಬುಗಳನ್ನು ಹಿಡಿದು ನೃತ್ಯ ಮಾಡುವ ವಿಶೇಷ ಹಬ್ಬ ಆಚರಿಸಲಾಯಿತು.
ಜಿಂಕೆ ಕೊಂಬುಗಳನ್ನು ಹಿಡಿದು ನೃತ್ಯ ಮಾಡುವುದು ಒಂದು ಕಡೆಯಾದ್ರೆ ಮತ್ತು ತೆಂಗಿನ ಕಾಯಿಯನ್ನು ಗುಂಪಿನ ಮಕ್ಕಳಿಗೆ ಕೊಟ್ಟು ಕಿತ್ತಾಡಲು ಬಿಡುವ ಕ್ರೀಡೆಗಳು ಇನ್ನೊಂದೆಡೆ, ಇದು ಕೊಡಗಿನ ಕೊಡವರು ಶ್ರೀ ಭಗವತಿ ಮತ್ತು ಅಯ್ಯಪ್ಪ ದೇವರ ವಾರ್ಷಿಕ ಹಬ್ಬದ ಸಂಭ್ರಮ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೇರಳ ಗ್ರಾಮದಲ್ಲಿ ಕೊಡವರು ನೂರಾರು ವರ್ಷಗಳ ಇತಿಹಾಸ ಇರುವ ಶ್ರೀ ಭಗವತಿ ದೇವರ ವಾರ್ಷಿಕ ಹಬ್ಬವನ್ನು ಆಚರಣೆ ಮಾಡಿದರು.
ಈ ಹಬ್ಬ 1 ವಾರಗಳ ಕಾಲ ನಡೆಯುತ್ತದೆ. ಪ್ರತಿದಿನ ಒಂದೊಂದು ದಿನ ಬೇರೆ ಬೇರೆ ಪೂಜೆಗಳನ್ನು ಮಾಡುತ್ತಾ ದೇವರ ಉತ್ಸವ ಮಾಡಲಾಗುತ್ತದೆ. ಕೊನೆಯ ದಿನದಲ್ಲಿ ಮಾತ್ರ ದೇವಸ್ಥಾನದಲ್ಲಿ ಜಿಂಕೆ ಕೊಂಬುಗಳನ್ನು ಹಿಡಿದು ನೃತ್ಯ ಮಾಡುವುದು ವಾಡಿಕೆ. ನೂರಾರು ಕೊಡವರು ಮತ್ತು ಸುತ್ತಲಿನ ಹಾಡಿ ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಈ ಹಬ್ಬದಲ್ಲಿ ಜಿಂಕೆ ಕೊಂಬುಗಳನ್ನು ಹಿಡಿದು ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನದ ಆವರಣದಲ್ಲಿ ನೃತ್ಯ ಮಾಡುತ್ತಾ ಆಚರಣೆ ಮಾಡುವುದು ಈ ಹಬ್ಬದ ವಿಶೇಷತೆ.
ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವರಿಗೆ ಹರಕೆ ಹೊತ್ತುಕೊಂಡರೆ ಅಂದುಕೊಂಡಿದ್ದು, ಈಡೇರುತ್ತದೆ ಎಂಬ ನಂಬಿಕೆ ಇದೆ. ಬಹಳ ಹಿಂದಿನ ಕಾಲದಲ್ಲಿ ಈ ಹಬ್ಬವನ್ನು ಕಾಡಿನಲ್ಲಿ ವಾಸವಿರುವ ಕಾಡು ಜನರು ಆಚರಣೆ ಮಾಡುತ್ತಿದ್ದರು. ಆಗ ಕಾಡಿನ ಮಕ್ಕಳಿಗೆ ರೋಗಗಳು ಬಂದರೆ ಭಗವತಿ ಮತ್ತು ಬೇಟೆಗಾರ ಅಯ್ಯಪ್ಪ ದೇವರಿಗೆ ಹರಕೆಗಳನ್ನು ಹೊರುತ್ತಿದ್ದರು. ಕಾಡಿಗೆ ಬೇಟೆಗೆ ಹೋಗಿ ಕಾಡಿನಲ್ಲಿ ಜಿಂಕೆಗಳನ್ನು ಕೊಂದು, ಜಿಂಕೆಯ ಕೊಂಬುಗಳನ್ನು ತಂದು ದೇವರ ಸನ್ನಿಧಿಯಲ್ಲಿ ಇಟ್ಟು ಪೂಜೆ ಸಲ್ಲಿಸಿ ನಂತರ ಜಿಂಕೆ ಕೊಂಬುಗಳನ್ನು ಹಿಡಿದು ವಾದ್ಯಗಳ ನಾದಕ್ಕೆ ನೃತ್ಯ ಮಾಡುತ್ತ ಹರಕೆಗಳನ್ನು ತೀರಿಸುತ್ತಿದ್ದರು.
ನಂತರದ ದಿನಗಳಲ್ಲಿ ಈ ಹಬ್ಬವನ್ನು ಕಾಡು ಜನರು ಮಾಡಲಿಲ್ಲ. ಈ ಕಾರಣಕ್ಕೆ ಕೊಡವರು ಭಗವತಿ ಮತ್ತು ಅಯ್ಯಪ್ಪ ದೇವರ ಉತ್ಸವನ್ನು ಆಚರಣೆ ಮಾಡುತ್ತಿದ್ದಾರೆ. ಈ ದೇವರಿಗೆ ಕಾಡು ಜನರ ರೀತಿಯಲ್ಲಿ ಜಿಂಕೆ ಕೊಂಬುಗಳನ್ನು ಹಿಡಿದು ಕೆಲವು ಮನರಂಜನೆಯ ಆಟಗಳನ್ನು ಆಡುತ್ತಾ ನೃತ್ಯ ಮಾಡುತ್ತ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ. ಜಿಂಕೆ ಕೊಂಬುಗಳನ್ನು ಹಿಡಿದು ನೃತ್ಯ ಮಾಡುವುದರ ಹಿಂದೆ ಕೆಲ ಕಾರಣಗಳು ಇವೆ.
ಭಗವತಿ ದೇವರ ಜೊತೆಯಲ್ಲಿ ಬೇಟೆಗಾರ ಅಯಪ್ಪ ದೇವರು ಇದ್ದು, ಅಲ್ಲಿ ಜಿಂಕೆ ಕೊಂಬುಗಳಿಗೆ ಪೂಜೆ ಸಲ್ಲಿಸಿ, ನೃತ್ಯ ಮಾಡುವುದರಿಂದ ಕಷ್ಟಗಳ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಜನ ಕೊಡವರ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ ಇಲ್ಲಿನ ಜಾನಪದ ಆಚರಣೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನ ವಿಶಿಷ್ಠ ಸಂಸ್ಕೃತಿಯ ಪ್ರತೀಕ ಕೋವಿ ಹಬ್ಬ ಆಚರಣೆ.. ಕೊಡವರ ಧಾರ್ಮಿಕ ಸಂಕೇತ ಈ ಬಂದೂಕು