ಕಲಬುರಗಿ: ಕಾಂಗ್ರೆಸ್ ಮುಖಂಡನ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಬಸವರಾಜ ಚೌಲ್ ಅವರ ಪುತ್ರ ಚಂದ್ರಶೇಖರ್ ಚೌಲ್ (21) ಕೊಲೆಯಾದ ಯುವಕ. ಆಳಂದ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ರಾತ್ರಿ ಚಂದ್ರಶೇಖರ್ ತನ್ನ ಸ್ನೇಹಿತ ಮಿಲನ್ ಎಂಬಾತನೊಂದಿಗೆ ಆಳಂದ ಪಟ್ಟಣದ ಹೊರವಲಯ ಜಿಡಗಾ ಬಳಿ ನಿರ್ಜನ ಪ್ರದೇಶದಲ್ಲಿ ಪಾರ್ಟಿಗೆಂದು ಹೋಗಿದ್ದ. ಈ ವೇಳೆ ಇಬ್ಬರು ಮದ್ಯ ಸೇವಿಸಿ ವಾಪಸ್ ಹೋಗಬೇಕೆನ್ನುವಾಗ ಇಬ್ಬರ ಮಧ್ಯೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿದೆ. ಮಿಲನ್ ತನ್ನ ಬಳಿ ಇದ್ದ ಚಾಕುವಿನಿಂದ ಚಂದ್ರಶೇಖರ್ಗೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಕಲಬುರಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆರೋಪಿ ಮಿಲನ್ ನೇರವಾಗಿ ಆಳಂದ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, "ಚಂದ್ರಶೇಖರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದೆ. ತನಿಖೆಯ ನಂತರ ಕಾರಣ ತಿಳಿದುಬರಲಿದೆ" ಎಂದರು.
ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, "ಚಂದ್ರಶೇಖರ ಒಳ್ಳೆಯ ಹುಡುಗ. ಯಾರ ತಂಟೆಗೂ ಹೋಗುವವನಲ್ಲ. ಆತನನ್ನು ಕರೆದುಕೊಂಡು ಹೋಗಿ ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಚಂದ್ರಶೇಖರ ಚೌಲ್ ಮತ್ತು ಮಿಲನ್ ಇಬ್ಬರೂ ಸ್ನೇಹಿತರು. ಒಂದೇ ಬೀದಿಯವರಾಗಿದ್ದಾರೆ. ಇಬ್ಬರ ತಂದೆಯವರು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆಪ್ತರೆಂದು ಹೇಳಲಾಗುತ್ತಿದೆ.
ಪತ್ನಿ ಹತ್ಯೆ ಮಾಡಿದ ಪತಿ ಬಂಧನ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಕಾಶಮ್ಮ ಈಳಿಗೇರ ಕೊಲೆಯಾದವರು. ಮಾರುತಿ ಈಳಿಗೇರ ಹಂತಕ. ರಟಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ರಾಯಬಾಗದಲ್ಲಿ ಕಾರು ಡಿಕ್ಕಿಯಾಗಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ; ಸಿಸಿಟಿವಿ ವಿಡಿಯೋ