ಕೊಡಗು: ರಾಜಕೀಯ ಒತ್ತಡದಲ್ಲಿ ಇರುತ್ತಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಇಂದು ಎಲ್ಲಾ ಜಂಜಾಟಗಳಿಂದ ದೂರವಾಗಿ ಮೊಮ್ಮಗನ ನಾಮಕರಣ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಸಂತೋಷದಿಂದ ಕಾಲ ಕಳೆದರು.
ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ತಮ್ಮ ಬೀಗರು ನಾಣಯ್ಯ ಅವರ ಮನೆಯಲ್ಲಿ ತಮ್ಮ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿ ಇಡೀ ದಿನ ಕಾಲ ಕಳೆದರು. ಕೋವಿಡ್ ಇರುವ ಹಿನ್ನೆಲೆಯಲ್ಲಿ ಬೇರೆ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಸದಾನಂದಗೌಡ ಅವರ ಕುಟುಂಬ, ಮಗ ಕಾರ್ತಿಕ್ ಮತ್ತು ಅವರ ಪತ್ನಿ, ಮತ್ತು ಬೀಗರಾದ ನಾಣಯ್ಯ ಅವರ ಕುಟುಂಬದವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಣಯ್ಯ ಅವರ ಹೆಂಡತಿ ಸುಧಾ ನಾಣಯ್ಯ ತಮ್ಮ ಮೊಮ್ಮಗನನ್ನು ಕಾಲ ಮೇಲೆ ಮಲಗಿಸಿಕೊಂಡು ವಿವಿಧ ಆಚರಣೆಗಳನ್ನು ನೆರವೇರಿಸಿದರು.
ಈ ವೇಳೆ ಸದಾನಂದಗೌಡ ಮತ್ತು ಪತ್ನಿ ಡಾ.ಟಿ ಸದಾನಂದಗೌಡ ಅವರು ಮೊಮ್ಮಗನ ಕೊರಳಿಗೆ ಚಿನ್ನದ ಹಾರವನ್ನು ಉಡುಗೊರೆ ನೀಡಿದರು. ಅಲ್ಲದೆ ಬೆಳ್ಳಿಯ ಹೊಳಲೆಯಲ್ಲಿ ಬೆಣ್ಣೆ ತಿನ್ನಿಸಿ ಹಾರೈಸಿದರು. ಅರೆಗೌಡ ಸಂಪ್ರದಾಯದಂತೆ ನಾಮಕರಣ ಮಾಡಿ ಬಳಿಕ ತೊಟ್ಟಿಲಿಗೆ ಹಾಕಿ ತೂಗಿ ಸಂಭ್ರಮಿಸಿದರು. ಮೊಮ್ಮಗನಿಗೆ ದಕ್ಷ್ ಎಂದು ಹೆಸರಿಟ್ಟು ಹಾರೈಸಿದ್ದೇವೆ. ಅವರು ದೊಡ್ಡವರಾದ ಮೇಲೆ ಯಾವ ಹೆಸರಿಟ್ಟುಕೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಸದಾನಂದಗೌಡ ಹಾಸ್ಯದಿಂದ ನಕ್ಕು ನುಡಿದರು. ಒಟ್ಟಿನಲ್ಲಿ ಸಚಿವ ಸದಾನಂದ ಎಲ್ಲಾ ಜಂಜಾಟಗಳನ್ನು ಬಿಟ್ಟು ಮೊಮ್ಮಗನ ನಾಮಕರಣದಲ್ಲಿ ಭಾಗವಹಿಸಿ ಖುಷಿಯಾಗಿದ್ರು.