ಕೊಡಗು: ಬೇಸಿಗೆ ಆರಂಭದಲ್ಲೇ ಜೀವನದಿ ಕಾವೇರಿ ಬರಿದಾಗುತ್ತಿದೆ. ಜನರಲ್ಲಿ ಈಗ ಕುಡಿವ ನೀರಿನ ಹಾಹಾಕಾರ ಶುರುವಾಗಿದೆ. ನದಿ ನೀರಿಗೆ ಕೊಳಚೆ ಕಲುಷಿತ ಕೊಳಚೆ ನೀರು ಬಂದು ಜಮೆಯಾಗುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗದ ಆತಂಕವೂ ಕಾಡುತ್ತಿದೆ.
ಜನರ ನೀರಿನ ದಾಹ ನೀಗಿಸುವ ಕಾವೇರಿ:ಕಾವೇರಿ ಜನರ ನೀರಿನ ದಾಹವನ್ನು ನೀಗಿಸುವ ಜೀವಜಲವಾಗಿದ್ದಾಳೆ. ಕಾವೇರಿ ನೀರನ್ನು ನಂಬಿ ಎಷ್ಟೋ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಬೇಸಿಗೆ ಆರಂಭದಲ್ಲಿ ನೀರು ಖಾಲಿ ಖಾಲಿ ಆಗಿದೆ. ಇದರಿಂದ ಕುಡಿಯುವ ನೀರಗೂ ಪರದಾಡುವ ಎದುರಾಗಲಿದೆ.
ಪ್ರತಿವರ್ಷವೂ ಬೇಸಿಗೆ ಆರಂಭದಲ್ಲಿ ಬತ್ತುತ್ತಿರುವ ಜೀವನದಿ: ಈ ವರ್ಷ ಫೆಬ್ರವರಿ ಅಂತ್ಯಕ್ಕೆ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿ, ಸುತ್ತಲಿನ ಹಳ್ಳಿಗಳಿಗೆ ಹಾಗೂ ಕುಶಾಲನಗರ ಪೇಟೆಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದರೂ, ಬೇಸಿಗೆ ಆರಂಭ ಆಗುತ್ತಿದ್ದಂತೆ ಪ್ರತಿ ವರ್ಷವೂ ನದಿ ಬತ್ತುತ್ತಿರುವುದು ಜನರನ್ನು ಚಿಂತೆಗೆ ದೂಡುತ್ತಿದೆ.
ಕುಶಾಲನಗರ ಪಿರಿಯಾಪಟ್ಟಣಗೆ ಕುಡಿವ ನೀರು ಪೂರೈಕೆ: ಕುಶಾಲನಗರ ಹಾಗೂ ಪಿರಿಯಾಪಟ್ಟಣದ ಜನರಿಗೆ ಕುಡಿಯುವ ಶುದ್ಧ ನೀರು ಒದಗಿಸಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಲವು ದಶಕಗಳ ಹಿಂದೆಯೇ ನೀರಿನ ಯೋಜನೆಯನ್ನು ರಚಿಸಲಾಗಿತ್ತು. ಮಂಡಳಿಯು ಕುಶಾಲನಗರ, ಗುಮ್ಮನಕೊಳ್ಳಿ, ಮುಳ್ಳುಸೋಗೆ ಹಳ್ಳಿಯ 30 ಸಾವಿರ ಜನರಿಗೆ ನೀರು ಒದಗಿಸಲು ಬದ್ಧವಾಗಿತ್ತು.
ಕುಶಾಲನಗರಕ್ಕೆ ಬೇಕು ಪ್ರತಿನಿತ್ಯ 28 ಲಕ್ಷ ಲೀಟರ್ ನೀರು: ಆದ್ರೆ ಈಗ ಕುಶಾಲನಗರವೊಂದಕ್ಕೆ ನಿತ್ಯ 28 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಬೈಚೇನಹಳ್ಳಿ ಪಟ್ಟಣದ ಬಳಿ ನದಿಯಿಂದ ನೀರನ್ನು ಪಂಪ್ ಮಾಡುವ ಕಾಮಗಾರಿ ಚಾಲನೆಯಲ್ಲಿದೆ. ಕುಶಾಲನಗರದ ಕೆಲ ಪ್ರದೇಶಗಳಿಗೆ ಖಾಸಗಿ ಬೋರ್‌ವೆಲ್ ನಿಂದ ನೀರು ಸಹ ಪೂರೈಕೆ ಆಗುತ್ತಿದೆ.
10 ದಿನದಲ್ಲಿ ನದಿಯಲ್ಲಿ ನೀರಿನ ಮಟ್ಟ ಕುಸಿತ: ಬೈಚೆನಹಳ್ಳಿ ಬಳಿ ನಿತ್ಯವೂ ಎರಡು 60 ಎಚ್‌ಪಿ ಪವರ್‌ನ ಪಂಪ್ ಮೂಲಕ 9 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರತಿ ಮೂರು ದಿನಕ್ಕೊಮ್ಮೆ, ಎರಡು ಗಂಟೆ ಕಾಲ ನದಿಯಿಂದ ನೀರು ಪಂಪ್ ಮಾಡಲಾಗುತ್ತಿದೆ. ಮುಂದಿನ 10 ದಿನದಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಆದರೆ ತಕ್ಷಣ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.
ನದಿಗೆ ಬರುತ್ತಿರುವ ಕಲುಷಿತ ನೀರು: ನಗರದ ಕಲುಷಿತ ನೀರು ನೇರವಾಗಿ ನದಿ ದಡಕ್ಕೆ ಬಂದು ಸೇರುತ್ತಿದೆ. ನದಿ ನೀರು ಕಲುಷಿತಗೊಳ್ಳುತ್ತಿದ್ದು, ಉಪಯೋಗಿಸಲು ಯೋಗ್ಯವಲ್ಲದಂತಾಗಿದೆ. ಒಂದು ವೇಳೆ, ಬಳಸಿದರೂ ಸಾಂಕ್ರಾಮಿಕ ಕಾಯಿಲೆ ಹಬ್ಬುವ ಭೀತಿ ಎದುರಾಗಿದೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ನದಿಯ ಸ್ವಚ್ಛತೆ ಕಾಪಾಡಲು ಹಾಗೂ ನದಿ ನೀರಿನ ಬಳಕೆಗೆ ಸೂಕ್ತ ಯೋಜನೆ ರೂಪಿಸಬೇಕಿದೆ. ಇದರ ಜತೆಗೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ.
ಇದನ್ನೂಓದಿ:ಆಲಮಟ್ಟಿ 9ಸ್ಕಿಂಗೆ ಅಧಿಕಾರಿಗಳು ಅಪಸ್ವರ ಎತ್ತಿದ್ದರೂ ರಿಸ್ಕ್ ತೆಗೆದುಕೊಂಡು ಜಾರಿ ಮಾಡಿದೆ: ಸಿಎಂ ಬಸವರಾಜ್ ಬೊಮ್ಮಾಯಿ