ಕೊಡಗು : ರಾಜ್ಯದಲ್ಲಿ ರೈಲು ಓಡಾಡದ ಏಕೈಕ ಜಿಲ್ಲೆ ಎಂಬ ಹಣೆಪಟ್ಟಿ ಜಿಲ್ಲೆಗಿತ್ತು. ಆದ್ರೆ, ಇದೀಗ ಮೈಸೂರು ಗಡಿ ನಗರಿ ಕುಶಾಲನಗರಕ್ಕೆ ರೈಲ್ವೆ ಸಂಪರ್ಕಕ್ಕೆ ಸರ್ವೇ ಕಾರ್ಯ ಆರಂಭವಾಗಿದೆ. ಇದೇ ವೇಳೆ ಈ ಕಾರ್ಯಕ್ಕೆ ಪರ-ವಿರೋಧವೂ ಕೇಳಿ ಬಂದಿದೆ.
ಕಳೆದ ಮೂರು ದಶಕಗಳಿಂದಲೇ ನಮಗೂ ರೈಲ್ವೆ ಸಂಪರ್ಕ ಬೇಕು ಅಂತಾ ಇಲ್ಲಿನ ಜನ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಅದರಂತೆ ಇದೀಗ ಒಟ್ಟು 1,885 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೈಸೂರಿನಿಂದ ಕುಶಾಲನಗರದವರೆಗಿನ 87 ಕಿಲೋಮೀಟರ್ ಉದ್ದದ ಮಾರ್ಗಕ್ಕೆ ರೈಲ್ವೆ ಸಚಿವಾಲಯ ಮಂಜೂರಾತಿ ನೀಡಿದೆ.
ಮೈಸೂರಿನಿಂದ ಬೆಳಗೊಳದ ಮೂಲಕ ಕುಶಾಲನಗರಕ್ಕೆ ರೈಲು ಸಂಪರ್ಕ ನೀಡಿದರೆ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ತಜ್ಞರು ವರದಿ ನೀಡಿದ್ದರು. ಹಾಗಾಗಿ, ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದ್ರೆ, ಸಾಕಷ್ಟು ಒತ್ತಡ ಕೇಳಿ ಬಂದಿದ್ದರಿಂದ 2019ರಲ್ಲಿಯೇ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು.
ಇದಾದ ಬಳಿಕ ಹಲವು ಬಾರಿ ಸರ್ವೇ ಕಾರ್ಯವೂ ನಡೆದಿತ್ತು. ಇದೀಗ ಅಂತಿಮ ಸ್ಥಳ ಸಮೀಕ್ಷೆ ವರದಿ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಕಾಳು ಮೆಣಸನ್ನು ರಫ್ತು ಮಾಡಲು ಈ ರೈಲ್ವೆ ಸಂಪರ್ಕ ಸಹಾಯಕವಾಗಲಿದೆ. ಅಲ್ಲದೆ, ಪ್ರವಾಸಿಗರಿಗೂ ಅನುಕೂಲವಾಗಲಿದೆ ಅಂತಾರೆ ಸ್ಥಳೀಯರು.
ಒಂದೆಡೆ ರೈಲ್ವೆ ಮಾರ್ಗಕ್ಕೆ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಪರಿಸರವಾದಿಗಳು ಅಪಸ್ವರ ತೆಗೆದಿದ್ದಾರೆ. ಈಗಾಗಲೇ, ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹೈವೇ ಹೆಸರಿನಲ್ಲಿ ಇಡೀ ಕೊಡಗನ್ನ ನಾಶ ಪಡಿಸಲಾಗುತ್ತಿದೆ. ಇದೀಗ ರೈಲ್ವೆ ಸಂಪರ್ಕದ ಹೆಸರಲ್ಲಿ ಮತ್ತಷ್ಟು ಪರಿಸರ ಹಾಳು ಮಾಡುವುದು ಬೇಡ ಎಂದು ತಾಕೀತು ಮಾಡಿದ್ದಾರೆ.
ಪರಿಸರವಾದಿಗಳ ವಾದ ಏನೇ ಇದ್ರೂ, ಕೇಂದ್ರವಂತೂ ಯೋಜನೆಗೆ ಅಸ್ತು ಅಂದಿದೆ. ಅಂತಿಮ ಸ್ಥಳ ಸಮೀಕ್ಷೆ ವರದಿ ಮುಗಿಯುತ್ತಲೇ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಇನ್ನು ಎರಡರಿಂದ ಮೂರು ವರ್ಷದಲ್ಲಿ ಚುಕುಬುಕು ರೈಲು ಕೊಡಗು ಪ್ರವೇಶಿಸಲಿದೆ. ಈ ಮೂಲಕ ರೈಲು ಓಡದ ಏಕೈಕ ಜಿಲ್ಲೆ ಅನ್ನೋ ಹಣೆಪಟ್ಟಿಯನ್ನ ಕಳಚಿಕೊಳ್ಳಲಿದೆ.
ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ದಡ ಸೇರಿ ಲಂಗರು ಹಾಕಿದ ನೂರಾರು ಬೋಟ್ಗಳು