ಕೊಡಗು : ಮೂರು ಜನರನ್ನು ಬಲಿ ಪಡೆದ ನರಭಕ್ಷಕ ಹುಲಿ ಇನ್ನೂ ಪತ್ತೆಯಾಗಿಲ್ಲ, ಹುಲಿಯನ್ನು ಕೊಂದು ಹಾಕಿ ಇಲ್ಲ ನಮಗೆ ಕೊಲ್ಲುವುದಕ್ಕೆ ಅನುಮತಿ ಕೊಡಿ ಎಂದು ಅರಣ್ಯ ಇಲಾಖೆ ವಿರುದ್ದ ರೈತ ಸಂಘ ಮತ್ತು ಸ್ಥಳೀಯರು ಪೊನ್ನಂಪೇಟೆಯಲ್ಲಿ ಆನೆಚೌಕುರು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮೀತಿ ಮೀರಿದ್ದು, ಜನತೆ ಭಯದಲ್ಲೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಇಬ್ಬರನ್ನು ಕೊಂದು ಹಾಕಿತ್ತು. ನಿನ್ನೆ ಒಬ್ಬರನ್ನು ಹುಲಿ ಬಲಿ ಪಡೆದಿದೆ. ಅದೇ ಸ್ಥಳದಲ್ಲಿ ಇನ್ನೊಬ್ಬರನ್ನು ಗಾಯಗೊಳಿಸಿದೆ. 15 ದಿನಗಳಿಂದ ಅರಣ್ಯ ಇಲಾಖೆ ಎಷ್ಟೇ ಹರ ಸಾಹಸಪಟ್ಟರೂ, ಕೂಡ ಹುಲಿಯ ಸುಳಿವೇ ಸಿಗುತ್ತಿಲ್ಲ. ಆದ್ದರಿಂದ ಇನ್ನೊಂದು ಅನಾಹುತ ನಡೆಯುವ ಮುಂಚಿತವಾಗಿ ಹುಲಿಯನ್ನು ಹಿಡಿಯಿರಿ ಎಂದು ಜನ ಬೀದಿಗಿಳಿದು ಪ್ರತಿಭಟನೆಗೆ ನಡೆಸಿದರು. ಹುಲಿಯನ್ನು ಕೊಂದು ಹಾಕಿ, ಇಲ್ಲ ನಮಗೆ ಅನುಮತಿ ಕೊಡಿ. ನಾವು ಕೊಲ್ಲುತ್ತೇವೆ ಎಂದರು.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಸತತವಾಗಿ ಹುಲಿ ಜನರು ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಪೊನ್ನಂಪೇಟೆ ತಾಲೂಕಿನ ಶ್ರಿಮಂಗಲ, ಕುಟ್ಟ, ಶೆಟ್ಟಿಗೇರಿ ಹರಿಹರ ಭಾಗದಲ್ಲಿ ಇಬ್ಬರನ್ನು ಹುಲಿ ಬಲಿ ಪಡೆದ ಬಳಿಕ ಜನ ಬೆಚ್ಚಿ ಬಿದ್ದಿದ್ದಾರೆ. ಐದು ದಿನಗಳಿಂದ ಹುಲಿ ಸೆರೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸುತ್ತಿದೆ. ಆದರೂ ಹುಲಿ ಮಾತ್ರ ಪತ್ತೆಯಾಗಿಲ್ಲ.
ಹುಲಿ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಖುದ್ದು ಪಿಸಿಸಿಎಫ್ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಕಾರ್ಯಾಚರಣೆಗೆ ಶಾರ್ಪ್ ಶೂಟರ್ ಕರೆಸಲಾಗಿದೆ. ಹಂತಕ ಹುಲಿಯನ್ನು ಸೆರೆ ಹಿಡಿಯಲು ಇಲಾಖೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಹುಲಿ ಸೆರೆಗಾಗಿ ನಮ್ಮ ಅಧಿಕಾರಿಗಳಿಗೆ ಎಲ್ಲಾ ರೀತಿಯ ಅಧಿಕಾರವನ್ನೂ ನೀಡಲಾಗಿದೆ. ಕಾರ್ಯಾಚರಣೆಗೆ ಮತ್ತಿಗೋಡು ಅರಣ್ಯದಿಂದ ಅಭಿಮನ್ಯು ನೇತೃತ್ವದಲ್ಲಿ 4 ಆನೆಗಳನ್ನು ಕರೆಸಲಾಗಿದೆ. ಆದಷ್ಟು ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.