ಕೊಡಗು: ದೀರ್ಘಾವಧಿವರೆಗೆ ಪ್ರಭಾವವನ್ನು ಮುಂದುವರೆಸಿದ ಮಾರಣಾಂತಿಕ ವೈರಸ್ ಕೊರೊನಾ ತೀವ್ರತೆಯನ್ನು ಮನಗಂಡ ಸರ್ಕಾರ ಶೈಕ್ಷಣಿಕ ಚಟುವಟಿಕೆಗಳ ಸ್ವರೂಪವನ್ನೇ ಬದಲಿಸಿದೆ. ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳಿಗೆ ವಿನೂತನ ವಿಧಾನಗಳ ಮೂಲಕ ಪಾಠ ಬೋಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಪಾಠ ಬೋಧನೆಗೆ ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.
ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕತೆ ಹಿತದೃಷ್ಟಿಯಿಂದ ಸರ್ಕಾರ ರಾಜ್ಯದಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪೌಢಶಾಲೆಗಳ ವಿದ್ಯಾರ್ಥಿಗಳಿಗೆ ವಠಾರಶಾಲೆ ಮತ್ತು ವಿದ್ಯಾಗಮ ಎನ್ನುವ ಚಟುಚಟಿಕೆಗಳನ್ನು ಹಾಕಿಕೊಂಡು ಮಕ್ಕಳಿಗೆ ತರಗತಿಗಳನ್ನು ಹೇಳಿಕೊಡಲಾಗುತ್ತಿದೆ.
ಶಾಲೆಗಳ ಬಾಗಿಲನ್ನು ತೆರೆಯದೇ ಹೆಚ್ಚಿನ ಮಕ್ಕಳು ಇದ್ದಲ್ಲಿಗೆ ಶಿಕ್ಷಕರು ಹೋಗಬೇಕಿದೆ. ಇದು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಇದನ್ನು ಸಾಕಾರಗೊಳಿಸಲು ಶಿಕ್ಷಕರಿಗೆ ಕೆಲವು ಸಮಸ್ಯೆಗಳು ಎದುರಾಗಿವೆ. ಕೊಡಗು ಜಿಲ್ಲೆಯಲ್ಲಿ ಮುಖ್ಯವಾಗಿ ಕೊರೊನಾ ಪರಿಣಾಮದಿಂದ ಜನರ ಸಂಪರ್ಕ ಕೊಂಡಿಯಾಗಿರುವ ಖಾಸಗಿ ಬಸ್‌ಗಳ ಸಂಚಾರವಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ ಮಕ್ಕಳನ್ನು ಸಂಪರ್ಕಿಸಲು ಸಮಸ್ಯೆಯಾಗಿದೆ.
ಕೊಡಗು ದಟ್ಟ ಹಸಿರಿನಿಂದ ಕೂಡಿದೆ. ಅಲ್ಲದೆ ಮನೆಗಳೂ ಕೂಡ ದೂರದಲ್ಲಿ ಇರುವುದರಿಂದ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಕಷ್ಟವಾಗುತ್ತಿದೆ. ಒಂದೆಡೆ ನಾಲ್ಕೈದು ಮಕ್ಕಳನ್ನು ಸೇರಿಸುವುದೇ ತ್ರಾಸವಾಗುತ್ತಿದೆ. ಮತ್ತೊಂದೆಡೆ ಚಿಕ್ಕ ಮಕ್ಕಳನ್ನು ಒಬ್ಬೊಬ್ಬರಾಗಿಯೇ ಕಳುಹಿಸುವುದಕ್ಕೂ ಪೋಷಕರೂ ಭಯಪಡುತ್ತಿದ್ದಾರೆ. ಹೀಗಾಗಿ ಕೆಲವು ಶಿಕ್ಷಕರು ಅನುಕೂಲವಾಗಿರುವ ರಸ್ತೆ ಬದಿಯ ಬಸ್ ನಿಲ್ದಾಣಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದಾರೆ. ಪೋಷಕರು ಕೂಡ ಮಕ್ಕಳೊಂದಿಗೆ ಬಂದು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಪರ್ಯಾಯ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಈ ಕ್ರಮ ಎಲ್ಲಾ ಜಿಲ್ಲೆಗಳಿಗೆ ಸೂಕ್ತವಾಗಿಲ್ಲ. ಮಕ್ಕಳ ಸಂಖ್ಯೆ ಕಡಿಮೆ ಇರುವಂತಹ ಹಲವು ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸಲು ಸರ್ಕಾರ ಅನುಮತಿ ಕೊಟ್ಟರೆ ಒಳ್ಳೆಯದು ಎನ್ನುತ್ತಿದ್ದಾರೆ ಶಿಕ್ಷಕರು.