ಕೊಡಗು: ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ರಣಭೀಕರ ಮಳೆಗೆ ತಲಕಾವೇರಿಯಲ್ಲಿ ಸಂಭವಿಸಿದ್ದ ಬ್ರಹ್ಮಗಿರಿ ಬೆಟ್ಟದ ಭೂಕುಸಿತದಲ್ಲಿ, ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬ ಮೃತಪಟ್ಟು ಎರಡು ತಿಂಗಳೇ ಮುಗಿಯಿತು. ಆದರೆ ಇಂದಿಗೂ ಅವರ ಮಕ್ಕಳಿಗೆ ಸರ್ಕಾರದ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಾರಾಯಣ ಆಚಾರ್ ಅವರ ಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಇಬ್ಬರಿಗೂ ತಲಾ ಎರಡೂವರೆ ಲಕ್ಷದಂತೆ ಪರಿಹಾರದ ಚೆಕ್ ವಿತರಿಸಲಾಗಿತ್ತು. ಅವರು ಮತಾಂತರಗೊಂಡು ಅವರ ಹೆಸರುಗಳನ್ನು ಬದಲಾಯಿಸಿಕೊಂಡಿದ್ದರಿಂದ ಹೆಸರು ಬದಲಾವಣೆಯಲ್ಲಿ ಗೊಂದಲವಾಗಿ ಇಂದಿಗೂ ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಅವರ ತಂದೆ ನಾರಾಯಣ ಆಚಾರ್ ಮತ್ತು ಕುಟುಂಬ ಭೂಕುಸಿತದಲ್ಲಿ ಕಣ್ಮರೆಯಾಗುತ್ತಿದ್ದಂತೆ ಆಸ್ಟ್ರೇಲಿಯಾದಿಂದ ಬಂದಿದ್ದ ಇಬ್ಬರು ಹೆಣ್ಣುಮಕ್ಕಳು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ತಮ್ಮ ತಂದೆ-ತಾಯಿ ಕಣ್ಮರೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಶೋಧ ಕಾರ್ಯ ನಡೆಸಿದಾಗ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ದೊರೆತಿತ್ತು. ಹೀಗಾಗಿ ಸರ್ಕಾರ ಐದು ಲಕ್ಷ ರೂಪಾಯಿ ಘೋಷಣೆ ಮಾಡಿ ಇಬ್ಬರು ಹೆಣ್ಣುಮಕ್ಕಳಿಗೆ ತಲಾ ಎರಡೂವರೆ ಲಕ್ಷದಂತೆ ಪರಿಹಾರದ ಚೆಕ್ ನೀಡಿದ್ದರು. ಚೆಕ್ ಸ್ವೀಕರಿಸಿದ ಇಬ್ಬರು ನಮ್ಮ ಹೆಸರು ಬದಲಾಗಿದೆ ಎಂದು ಮಡಿಕೇರಿ ತಹಶೀಲ್ದಾರ್ ಅವರಿಗೆ ಚೆಕ್ ವಾಪಸ್ ಮಾಡಿದ್ದರು. ಆಗಲೇ ಇಬ್ಬರು ಮತಾಂತರಗೊಂಡಿದ್ದಾರೆ ಎನ್ನೋ ವಿಷಯ ಗೊತ್ತಾಗಿತ್ತು. ಚೆಕ್ ನಲ್ಲಿ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂದು ನಮೂದಿಸಿದ್ದರೆ, ಅವರ ದಾಖಲೆ, ಬ್ಯಾಂಕ್ ಪಾಸ್ ಬುಕ್‍ಗಳಲ್ಲಿ ಶೆನೋನ್ ಫರ್ನಾಂಡಿಸ್ ಮತ್ತು ನಮಿತಾ ನಜೇರತ್ ಎಂದು ಹೆಸರಿದೆ. ಹೀಗಾಗಿ ಇಂದಿಗೂ ಅವರು ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ತಹಶೀಲ್ದಾರ್ ಅವರನ್ನು ಕೇಳಿದರೆ, ಅವರು ಇಂದಿಗೂ ಸರಿಯಾದ ದಾಖಲೆಗಳನ್ನು ನೀಡಿಲ್ಲ. ಪಾಸ್‍ಪೋರ್ಟ್ ನಲ್ಲೂ ಬೇರೆ ಹೆಸರಿದ್ದು, ಮೂಲ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದೇವೆ. ಸೋಮವಾರ ದಾಖಲೆಗಳನ್ನು ನೀಡಿದರೆ, ತಕ್ಷಣದಲ್ಲೇ ಪರಿಹಾರದ ಚೆಕ್ ಕ್ಲಿಯರ್ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಉಸ್ತುವಾರಿ ಸಚಿವರನ್ನು ಭೇಟಿಯಾದ ನಾರಾಯಣ ಆಚಾರ್ ಅವರ ಮಕ್ಕಳು ಪರಿಹಾರದ ಹಣವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಉಸ್ತುವಾರಿ ಸಚಿವ ವಿ ಸೋಮಣ್ಣ, ಅಂತ ಪುಣ್ಯಾತ್ಮನೇ ಹೋದ ಮೇಲೆ ಚೆಕ್ ನೀಡಿದರೆ ಏನು ಪ್ರಯೋಜನ. ಆದರೂ ಜಿಲ್ಲಾಧಿಕಾರಿಗೆ ಈ ವಿಷಯ ತಿಳಿಸಿದ್ದೇನೆ. ಕೂಡಲೇ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.