ಮಡಿಕೇರಿ (ಕೊಡಗು): ಮಳೆ ಅನಾಹುತ ತಡೆಯಲು ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ 40 ಪ್ರದೇಶಗಳಲ್ಲಿ ಭೂಕುಸಿತ, 45 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಮಳೆ ಅವಾಂತರಗಳಿಂದ ಜನ ಜಾನುವಾರುಗಳನ್ನು ರಕ್ಷಣೆ ಮಾಡಲು ಈಗಾಗಲೇ ಕಠಿಣ ತರಬೇತಿ ನೀಡಲಾಗುತ್ತಿದೆ.
ಕಳೆದ ಐದು ವರ್ಷಗಳಿಂದ ಕೊಡಗು ಅಕ್ಷರಶಃ ನಲುಗಿದೆ. 2018ರ ಜಲ ಪ್ರಳಯ, ಭೂಕುಸಿತದ ಕಹಿ ನೆನೆಪು ಇನ್ನೂ ಮಾಸಿಲ್ಲ. ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲು ಹಾಗೂ ಜನರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಮಡಿಕೇರಿ ಸಮೀಪದ ಕಲ್ಲು ಕ್ವಾರಿಯಲ್ಲಿ ತರಬೇತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಆಗುವ ಸಂಭವವಿದೆ. ಜಲ ಪ್ರಳಯದ ಸಮಯದಲ್ಲಿ ಜನರನ್ನು ರಕ್ಷಿಸುವುದಕ್ಕಾಗಿ ಈ ತರಬೇತಿ ನೀಡಲಾಗುತ್ತಿದೆ. 20 ಜಿಲ್ಲಾ ಮೀಸಲು ಪೊಲೀಸ್, 20 ನಾಗರಿಕ ಪೊಲೀಸ್ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ಮಾಡಿ ಕೂರ್ಗ್ ಅಡ್ವೆಂಚರ್ ಟೀಮ್ಗಳಿಗೆ ಮಡಿಕೇರಿ ಸಮೀಪದ ಕ್ವಾರಿಯಲ್ಲಿ ತರಬೇತಿ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಅಭ್ಯಾಸ ನಡೆಸಲಾಗುತ್ತಿದೆ. ಎಸ್ಪಿ ರಾಮರಾಜನ್ ಅವರು 120 ಅಡಿಗೂ ಹೆಚ್ಚು ಎತ್ತರ ಇರುವ ಕಲ್ಲು ಕ್ವಾರಿಯನ್ನು ಹತ್ತಿಳಿದು ತರಬೇತಿ ನೀಡಿದರು.
120 ಅಡಿ ಎತ್ತರವಿರುವ ಈ ಕ್ವಾರಿಯಲ್ಲಿ ಎಲ್ಲರೂ ರಾಕ್ ಕ್ಲೈಂಬಿಂಗ್ ಮಾಡುವ ಮೂಲಕ ತರಬೇತಿ ಪಡೆದರು. ಜಿಲ್ಲೆಯಲ್ಲಿ ಜಲ ಪ್ರಳಯ, ಭೂಕುಸಿತ ಸಂಭವಿಸಿದರೆ ಕ್ವಾರಿಯಲ್ಲಿ ಇರುವಂತಹ ರೀತಿಯಲ್ಲಿ ಇರುತ್ತದೆ. ಇಂತಹ ಪ್ರದೇಶದಲ್ಲಿ ಜನರು ಸಿಲುಕಿದರೆ ಅವರನ್ನು ಹೇಗೆ ರಕ್ಷಣೆ ಮಾಡಬೇಕು? ಎಂಬುದರ ಬಗ್ಗೆ ಇಲ್ಲಿ ತರಬೇತಿ ನೀಡಲಾಯಿತು. ಇದರೊಂದಿಗೆ ಟ್ರೀ ಟಾಪ್ ಕ್ಲೈಂಬಿಂಗ್ ಅಂದರೆ ಮರಗಳ ಮೇಲೆಯೇ ಒಂದು ಮರದಿಂದ ಮತ್ತೊಂದು ಮರಕ್ಕೆ ಹೋಗುವುದು ಹೇಗೆ ಎಂಬುವುದರ ಬಗ್ಗೆಯೂ ತರಬೇತಿ ನಡೆಯಿತು.
ಪ್ರವಾಹ, ಭೂಕುಸಿತ ಸಂಭವಿಸಿದರೆ ಅಪಾಯ ಸ್ಥಳಗಳಿಗೆ ತಲುಪಿ ಜನರನ್ನು ರಕ್ಷಣೆ ಮಾಡವ ರೀತಿಯಲ್ಲಿ ಅಭ್ಯಾಸ ಮಾಡಿದ್ದಾರೆ. ತಂತಿಗಳ ಮೇಲೆ ನಡೆಯುವುದನ್ನು ಕೂಡ ಅಭ್ಯಾಸ ಮಾಡಿದ್ದಾರೆ. ಈ ಮೂಲಕ ಜನರನ್ನು ರಕ್ಷಿಸಲು ನಾವು ಸಿದ್ಧರಿದ್ದೇವೆ ಎಂದು ಜನರಿಗೆ ಅಭಯ ನೀಡಿದ್ದಾರೆ. ಸ್ವತಃ ಎಸ್ಪಿ ರಾಮರಾಜನ್ ಅವರೇ ಕಲ್ಲು ಕ್ವಾರಿಯನ್ನು ಏರಿಳಿದು ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ. ಮಳೆ ಆರಂಭವಾದಾಗಿನಿಂದ ಮಳೆ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ದಿನದ 24 ಗಂಟೆಯೂ ಜನರ ರಕ್ಷಣೆಗಾಗಿ ಸಿದ್ದರಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಭಾಗಗಳಲ್ಲಿ ಮಳೆಯಾದರೆ ಜನ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಾರಿ ಜನ ಮಳೆಯ ಸಮಯದಲ್ಲಿ ಯಾವುದೇ ಆತಂಕ ಎದುರಿಸಬಾರದು ಎಂದು ಮೊದಲೇ ಸಿದ್ಧತೆ ಮಾಡಲಾಗುತ್ತಿದೆ. ಭಾರಿ ಮಳೆಗೆ ಧರೆಗುರುಳುವ ಮರಗಳನ್ನು ತಕ್ಷಣವೇ ತೆರವು ಮಾಡಲು ಬೇಕಾಗುವ ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ನಿಯೋಜನೆಗೆ ಆದೇಶ ನೀಡಲಾಗಿದೆ. ಮಳೆಯ ಕಾರಣದಿಂದ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಇದನ್ನೂ ಓದಿ: ಮುಂಗಾರು ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸಿ: ಕೊಡಗು ಡಿಸಿ ಸೂಚನೆ