ಮಡಿಕೇರಿ: ಜೂನ್ ಕಳೆದರೂ ಅದೇಕೋ ಮಳೆರಾಯ ಈ ಬಾರಿ ಕೊಡಗಿನ ಕಡೆ ಮುಖ ಮಾಡಿಲ್ಲ. ಹೀಗಾಗಿ ಇಲ್ಲಿನ ಜನ ಪೂಜೆ, ಹೋಮ- ಹವನಗಳಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದಿಂದ ವತಿಯಿಂದ ಮಳೆಗಾಗಿ ಪರ್ಜನ್ಯ ಪೂಜೆ ಮಾಡಲಾಯ್ತು. ದೊಡ್ಡ ಹೋಮ ಕುಂಡದ ಮುಂಭಾಗ ಕುಳಿತು ಅರ್ಚಕರು ಮಂತ್ರ ಪಠಣೆ ಮಾಡಿ ಎಣ್ಣೆ, ಎಳ್ಳು-ಬೆಲ್ಲ, ಹಣ್ಣು, ಅರಿಶಿಣ-ಕುಂಕುಮ, ಹಣ್ಣುಗಳನ್ನು ಹೋಮ ಕುಂಡಕ್ಕೆ ಹಾಕಿ ಕೊಡಗಿಗೆ ಉತ್ತಮ ಮಳೆ ಬರಲಿ ಎಂದು ವರುಣ ದೇವನನ್ನು ಒಲಿಸಿಕೊಳ್ಳಲಿ ಹೋಮ -ಹವನ ನೆರವೇರಿಸಿದ್ರು.
ಕೊಡಗಿಗೆ ವಾಡಿಕೆಯಷ್ಟು ಮಳೆಯಾಗದಿರುವುದಕ್ಕೆ ವರುಣ ದೇವನ ಮುನಿಸೇ ಕಾರಣ ಅಂತ ನಂಬಿರೋ ಇಲ್ಲಿನ ಜನ ಜಿಲ್ಲೆಯ ದೇವಾಲಯಗಳಲ್ಲಿ ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಳೆದ ವರ್ಷ ಅತೀವೃಷ್ಟಿಯಿಂದ ನಲುಗಿದ್ದ ಜನತೆ ಈ ವರ್ಷ ಅನಾವೃಷ್ಟಿಗೆ ತುತ್ತಾಗಿರುವುದು ವಿಪರ್ಯಾಸ.