ಮಡಿಕೇರಿ: ಭಾಗಮಂಡಲ ಬೆಟ್ಟ ನೆಲಸಮ ಮಾಡಿ, ರೆಸಾರ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಎಫ್‌ಡಿಎ ಅಧಿಕಾರಿ ಸತೀಶ್ ಅವರನ್ನು ಕೊಡಗು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಸತೀಶ್ ಮಡಿಕೇರಿ ತಾಲೂಕಿನ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ, ಅರಣ್ಯ ಪ್ರದೇಶವನ್ನು ನಾಶ ಪಡಿಸಿದ್ದರು. ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಾಧ್ಯಮಗಳ ವರದಿ ಆಧರಿಸಿ ಕೊಡಗು ಡಿಸಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.
ರೆಸಾರ್ಟ್‌ಗೆ ನಿಗದಿ ಪಡಿಸಿದ ಜಾಗವೇ ಬೇರೆಯಾಗಿದ್ದು, ಸ್ವಾಧೀನಕ್ಕೆ ಪಡೆದಿದ್ದೇ ಮತ್ತೊಂದು ಜಾಗವಾಗಿದೆ. ಸರ್ಕಾರದ ಬೆಟ್ಟವನ್ನು ಒತ್ತುವರಿ ಮಾಡಿ, ಅಕ್ರಮ ಕಾಮಗಾರಿ ನಡೆದಿದೆ ಎಂದು ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಸತೀಶ್ ಅವರನ್ನು ಅಮಾನತು ಮಾಡಲಾಗಿದೆ.