ಕೊಡಗು: ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ದೇವರು ಒಳ್ಳೆದು ಮಾಡಲಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಡಿ (ಜಾರಿ ನಿರ್ದೇಶನಾಲಯ) ದುರ್ಬಳಕೆ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತಕ್ಕೆ ಸಿಲುಕಿ ಕಣ್ಮರೆಯಾಗಿರುವ 4 ಕುಟುಂಬಗಳಿಗೆ ಈಗಾಗಲೇ ತಲಾ ₹ 1 ಲಕ್ಷ ವಿತರಿಸಲಾಗಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ನಾನೊಬ್ಬ ಬೆಂಗಳೂರಿಗನಾಗಿ ನನ್ನ ಮೇಲೆ ಕಾವೇರಿಯ ಋಣ ಸಾಕಷ್ಟಿದೆ. ಅದನ್ನು ತೀರಿಸಲು ಇದೊಂದು ಅವಕಾಶ ಸಿಕ್ಕಿದೆ. ಜಲಾಶಯ ಭರ್ತಿಯಾಗಿ ಈ ಭಾಗದ ರೈತರಿಗೆ ನೆಮ್ಮದಿಯ ಬದುಕು ಸಿಗಲಿ. ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿದೆ. ಡಿಸೆಂಬರ್ ನಂತರ ಜಲಾಶಯದಲ್ಲಿ ತುಂಬಿರುವ ಹೂಳನ್ನು ಮೇಲೆತ್ತಲು ನಿರ್ಧರಿಸಿದ್ದೇವೆ ಎಂದರು.
ಪದೇ ಪದೇ ಜಿಲ್ಲೆಯಲ್ಲಿ ಆಗುತ್ತಿರುವ ಭೂ ಕುಸಿತ ಹಾಗೂ ಪ್ರವಾಹದ ಬಗ್ಗೆ ಅಧ್ಯಯನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇನೆ. ಅಲ್ಲದೆ ಎತ್ತರ ಹಾಗೂ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಶಾಶ್ವತ ಸ್ಥಳಾಂತರಕ್ಕೆ ಚಿಂತಿಸಿದ್ದೇವೆ ಎಂದರು.