ಕೊಡಗು: ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣವನ್ನು ವೈವಿಧ್ಯಮಯವಾಗಿ ಹಾಗೂ ಸಂತಸದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ 'ಜೀವನ ಶಿಕ್ಷಣ' ನೀಡುತ್ತಿರುವ ಶಿಕ್ಷಕ ಸುರೇಶ ಮರಕಾಲ ಸಾಹೇಬರಕಟ್ಟೆ ಇವರಿಗೆ ಕೇಂದ್ರ ಸರ್ಕಾರದ MHR ವತಿಯಿಂದ ಕೊಡುವ ಪ್ರಸ್ತುತ ವರ್ಷದ 'ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ಲಭಿಸಿದೆ.
ಇವರು ಪ್ರಸ್ತುತ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸರಕಾರಿ ಪ್ರೌಢಶಾಲೆ ಬೆಸೂರಿನಲ್ಲಿ ಸಮಾಜ-ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಲಿಕೆಯನ್ನು ಲವಲವಿಕೆಯಿಂದ ಮೂಡಿಸುವ ಉದ್ದೇಶದಿಂದ ಔಪಚಾರಿಕ ಕಲಿಕೆ ಜೊತೆಗೆ ಮಕ್ಕಳಿಗೆ ಶಾಡೋ ಪ್ಲೇ, ಕನ್ನಡಿ ಬರಹ, ಪಿಯಾನೋ ಕೀ ಬೋರ್ಡ್ ಕಲಿಕೆ, ನಾಟಕ ಅಭಿನಯ, ಥರ್ಮೋಫೋಮ್-ಪೇಪರ್ ಕ್ರಾಫ್ಟ್ ಕಾರ್ಯಾಗಾರಗಳು, ತೋಟಗಾರಿಕೆ ಶಿಕ್ಷಣ, ಪ್ಲಬಿಂಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೈಂಟಿಂಗ್, ಸಂಗೀತ ಮೊದಲಾದುವುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.
ಶಿಕ್ಷಕ ಸುರೇಶ ಮರಕಾಲರು ಶ್ಯಾಡೋ ಪ್ಲೇ ಕಲಾವಿದರಾಗಿದ್ದು, ಅಚ್ಚರಿ ಎಂದರೆ ಶಾಲೆಯ ಬಹುತೇಕ ಮಕ್ಕಳು ಕೈಬೆರಳ ನೆರಳಾಟದಲ್ಲಿ ಪಾರಂಗತರಾಗಿದ್ದಾರೆ. ಜೊತೆಗೆ ಸುರೇಶ್ ಅವರು ಕನ್ನಡಿ ಬರಹಗಾರರೂ ಆಗಿದ್ದು, ಕಿರೀಟಕ್ಕೆ ತುರಾಯಿ ಸಿಕ್ಕಿಸಿದಂತೆ 8 ರಿಂದ 10 ನೇ ತರಗತಿಯ ಬಹುತೇಕ ಎಲ್ಲಾ ಮಕ್ಕಳು ಕನ್ನಡಿ ಬರಹವನ್ನು ಬರೆಯುತ್ತಾರೆ. ಅದು ಸಂಪೂರ್ಣ ತಲೆಕೆಳಗಾಗಿ ಅದೂ ಕೂಡಾ ನಾವೆಲ್ಲರೂ ನೇರವಾಗಿ ಬರೆಯುವುದಕ್ಕಿಂತಲೂ ವೇಗವಾಗಿ..!!
ಶಾಲೆಯಲ್ಲಿ ಸುಂದರವಾದ ತೋಟವಿದ್ದು, ಇಲ್ಲಿ ಮಕ್ಕಳಿಗೆ ಪರಿಸರ ಸ್ನೇಹಿ 'ತೋಟಗಾರಿಕಾ ಶಿಕ್ಷಣ'ವನ್ನು ಕಲಿಸಿಕೊಡುತ್ತಿದ್ದಾರೆ. ಪ್ಲಂಬಿಂಗ್‌ನಲ್ಲಿ ನುರಿತಿರುವ ಇವರು ವಿದ್ಯಾರ್ಥಿಗಳಿಗೆ ಪೈಪ್‌ಲೈನ್, ಟ್ಯಾಪ್‌ಗಳನ್ನು ಅಳವಡಿಸುವುದನ್ನು ಕಲಿಸಿಕೊಟ್ಟಿದ್ದಾರೆ. ಪರಿಣಾಮವಾಗಿ ಮಕ್ಕಳು ಪ್ಲಂಬಿಂಗ್ ಕಲೆಯಲ್ಲಿ ಎಷ್ಟು ಚುರುಕಾಗಿದ್ದಾರೆ ಎಂದರೆ ಇವರ ಶಾಲೆಗೆ ಬೇಕಾಗುವ ಬಹುತೇಕ ಎಲ್ಲಾ ಪೈಪ್‌ಲೈನ್ ಇತ್ಯಾದಿ ಪ್ಲಂಬಿಂಗ್ ಕೆಲಸಗಳನ್ನು ಮಕ್ಕಳೇ ಮಾಡಿಕೊಳ್ಳುತ್ತಾರೆ.
ಕಂಪ್ಯೂಟರ್‌ನಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಪಡೆದಿರುವ ಇವರು, ತಾವು ರಚಿಸಿರುವ ಅನೇಕ ಈ-ಪಾಠ (E-contents) ಗಳನ್ನು ಶಿಕ್ಷಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ನ್ನು ಆರಂಭಿಸಿದ್ದಾರೆ. ಶಾಲೆಯಲ್ಲಿ ಸುಸಜ್ಜಿತವಾದ ಕಂಪ್ಯುಟರ್ ಲ್ಯಾಬೋರೇಟರಿ ಇದ್ದು, ಮಕ್ಕಳು ತಾವಾಗಿಯೇ ಲ್ಯಾಪ್‌ಟಾಪ್, ಪ್ರೊಜೆಕ್ಟರ್, ಹೋಮ್ ಥಿಯೇಟರ್‌ಗಳನ್ನು ಜೋಡಿಸುವಷ್ಟು ತಂತ್ರಜ್ಞಾನದಲ್ಲಿ ಪಳಗಿದ್ದಾರೆ.
ಸುರೇಶ ಮರಕಾಲರು ಕಳೆದ ಆರೇಳು ವರ್ಷಗಳಿಂದ ಸಮಾಜವಿಜ್ಞಾನ ಹಾಗೂ ಐ.ಸಿ.ಟಿ. ಕರಿಕ್ಯುಲಂನ ಟಾಲ್ಪ್ ಇಂಡಕ್ಷನ್-1 ಹಾಗೂ ರಿಫ್ರೆಶರ್ ಕೋರ್ಸ್‌ನಂತಹ ಮಹತ್ವಾಕಾಂಕ್ಷೆಯ ಶಿಕ್ಷಣ ಯೋಜನೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಉತ್ತೇಜನ ನೀಡಲು ಸ್ವಾಮಿ ವಿವೇಕಾನಂದರ ಆದರ್ಶವಿಚಾರಗಳಿಂದ ಕೂಡಿರುವ ವಿವೇಕ ರಾತ್ರಿ ತರಗತಿಗಳನ್ನು ಹುಟ್ಟುಹಾಕಿದ್ದಾರೆ.
ಹಳ್ಳಿಯ ರೈತ ಕುಟುಂಬದಲ್ಲಿ ಲಕ್ಷ್ಮಣ ಹಾಗೂ ತುಂಗಾ ದಂಪತಿಯ ಮಗನಾಗಿ ಹುಟ್ಟಿ ಸ್ವತಃ ಶಾಲೆಯಲ್ಲಿ ಅನುತ್ತೀರ್ಣನಾಗಿ ಕಲಿಕೆಯಿಂದ ಹೊರಗುಳಿದ ವ್ಯಕ್ತಿಯೊಬ್ಬರು ಇಂದು ಸ್ವ-ಪರಿಶ್ರಮ, ಬಿಡದ ಛಲದಿಂದ ತಾವು ಸಾಗಿದ ದಾರಿಯಲ್ಲಿ ಸಮಾಜಕ್ಕೆ ಸೇವೆಯನ್ನು ನೀಡುತ್ತಾ, ಅಚ್ಚರಿ ಎನಿಸುವಂತೆ ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.