ಪೊನ್ನಂಪೇಟೆ (ಕೊಡಗು): ಆಸ್ತಿ, ಹಣ, ವೈಯಕ್ತಿಕ ದ್ವೇಷ, ಹೀಗೆ ಒಂದಿಲ್ಲೊಂದು ಕಾರಣಕ್ಕೆ ಕೊಲೆ ಮಾಡುವುದನ್ನು ಕೇಳಿದ್ದೇವೆ. ಆದರೆ, ಸ್ನೇಹಿತರು ಊಟಕ್ಕೆ ಕುಳಿತಾಗ ಕೋಳಿ ಸಾಂಬಾರ್ ಕಡಿಮೆ ಬಡಿಸಿದ್ದಕ್ಕೆ ಕೊಲೆಯಾಗಿರುವ ಘಟನೆ ನಾಲ್ಕೇರಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕುಮಾರ್ (25) ಎಂಬಾತ ಸ್ಥಳದಲ್ಲೇ ಮೃತಪಟ್ಟ ಸ್ನೇಹಿತನಾಗಿದ್ದಾನೆ. ಈತ ಕೂಲಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ಕುಮಾರ್, ಸುರೇಶ್ ದಾಸಾ ಹಾಗೂ ರಾಜು ನಂಜನಗೂಡು ತಾಲೂಕಿನ ಕೋತ್ತೆನಾಹಳ್ಳಿ ಕಾಲೋನಿ ನಿವಾಸಿಗಳು. 15 ದಿನಗಳ ಹಿಂದೆ ಇವರು ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಮಹೇಶ್ ಅವರ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು. ಈ ವೇಳೆ ಜಗಳವಾಗಿ ರಾಜು ಕುಮಾರ್ನನ್ನು ಕೊಲೆ ಮಾಡಿದ್ದಾನೆ.
ಘಟನೆ ವಿವರ: ಸೋಮವಾರ ರಾತ್ರಿ ಎಲ್ಲರೂ ಒಟ್ಟಿಗೆ ತೋಟದ ಮನೆಯ ಅಂಗಳದಲ್ಲಿ ಕೋಳಿ ಅಡುಗೆ ತಯಾರಿಸಿದ್ದಾರೆ. ಬಳಿಕ ಒಟ್ಟಿಗೆ ಊಟಕ್ಕೆ ಕುಳಿತುಕೊಂಡಿದ್ದಾರೆ. ಈ ವೇಳೆ, ನನಗೆ ಕೋಳಿ ಸಾರನ್ನು ಕಡಿಮೆ ಹಾಕಿದೀಯಾ ಎಂದು ಸ್ನೇಹಿತ ಕುಮಾರ್ ಮತ್ತು ಜೊತೆಗಿದ್ದ ಸುರೇಶ್ ಇಬ್ಬರೊಂದಿಗೆ ಜಗಳ ಶುರುಮಾಡಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿದಾಗ ಬ್ಯಾಟ್ ಹಾಗೂ ಅಡುಗೆ ಕಟ್ಟಿಗೆಯಿಂದ ಕುಮಾರ್ ತಲೆಗೆ ಬಲವಾಗಿ ಥಳಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೂ ಕೊಲೆ ಮಾಡಿರುವ ಆರೋಪಿ ರಾಜು ಅಪ್ರಾಪ್ತನಾಗಿದ್ದು ಕುಟ್ಟ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿಗಾಗಿ ನಡೆದ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ