ಭಾಗಮಂಡಲ (ಕೊಡಗು): ಗುಡ್ಡ ಕುಸಿತ ಉಂಟಾಗಿರುವ ಇಲ್ಲಿನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಕೋಳಿಕಾಡು ಪ್ರೆದೇಶದಿಂದ ಸುಮಾರು 4 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿದ್ದಾರೆ.
ಸಚಿವರ ಜತೆ ಶಾಸಕರಾದ ಅಪ್ಪಚ್ಚು ರಂಜನ್, ಕೆ ಜಿ ಬೋಪಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದುರ್ಗಮ ಹಾದಿಯಲ್ಲಿ ನಡೆದು ಬಂದಿದ್ದಾರೆ.
ನಡೆದಾಡಲು ಕಷ್ಟಕರವಾಗಿದ್ದ ಜಾಗದಲ್ಲಿ ಜೆಸಿಬಿಯ ಸಹಾಯದಿಂದ ಬೆಟ್ಟವೇರಿ ಸಾಹಸ ಮಾಡಿದ್ದಾರೆ. ವಿ.ಸೋಮಣ್ಣ ಸೇರಿ ಶಾಸಕರೆಲ್ಲರೂ ಜೆಸಿಬಿಯ ಮೇಲೆ ನಿಂತು ತುಸು ದೂರದವರೆಗೂ ಸಾಗಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಜಿಲ್ಲೆಯಲ್ಲಿ ಎದುರಾಗಿರುವ ಪ್ರಾಕೃತಿಕ ವಿಪತ್ತನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸುತ್ತಿದೆ. ಈಗಾಗಲೇ ದುರ್ಘಟನೆ ನಡೆದ ಸ್ಥಳಕ್ಕೆ ತಲುಪಲು ಇದ್ದಂತಹ ತೊಡಕುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿವಾರಿಸಿದ್ದೇವೆ. ಜನಪ್ರತಿನಿಧಿಗಳೂ ಕೂಡ ಇಲ್ಲಿನ ಸಂಕಷ್ಟಗಳಿಗೆ ತುರ್ತಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯ ಜನತೆಯೂ ಗುಡ್ಡಗಾಡು ಹಾಗೂ ತಗ್ಗು ಪ್ರದೇಶದಂತಹ ಅಪಾಯದ ಸ್ಥಳದಲ್ಲಿ ಇರುವವರು ಸುರಕ್ಷಿತ ಸ್ಥಳಕ್ಕೆ ಹೋಗುವುದು ಒಳಿತು ಎಂದು ಮನವಿ ಮಾಡಿದರು.